ಮನೆ ರಾಜ್ಯ ತುಂಗಭದ್ರಾ ಜಲಾಶಯ ಪ್ರಕರಣ: ರಾಜ್ಯ ಸರ್ಕಾರವೇ ಹೊಣೆಗಾರಿಕೆ ಹೊರಲಿ- ಬಿ.ವೈ ವಿಜಯೇಂದ್ರ

ತುಂಗಭದ್ರಾ ಜಲಾಶಯ ಪ್ರಕರಣ: ರಾಜ್ಯ ಸರ್ಕಾರವೇ ಹೊಣೆಗಾರಿಕೆ ಹೊರಲಿ- ಬಿ.ವೈ ವಿಜಯೇಂದ್ರ

0

ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಗೇಟ್ ಮುರಿದ ಘಟನೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರವೇ ಇದರ ಹೊಣೆಗಾರಿಕೆಗೆ ಹೊರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಆಗ್ರಹಿಸಿದರು.

Join Our Whatsapp Group

ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯದ 19ನೇ ಗೇಟ್ ಮುರಿದ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಿಸಿಎಂ ಡಿ ಕೆ ಶಿವಕುಮಾರ್ ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಡ್ಯಾಂ ಗೇಟ್ ಮುರಿದ ಘಟನೆಯಲ್ಲಿ ಯಾವ ಅಧಿಕಾರಿಯನ್ನು ಹೊಣೆಗಾರಿಕೆ ಮಾಡಲ್ಲ ಎಂದಿದ್ದಾರೆ. ಕಳೆದ ಒಂದು ವರ್ಷದಿಂದ ತುಂಗಭದ್ರಾ ಡ್ಯಾಂಗೆ ಚೀಪ್ ಇಂಜಿನಿಯರ್ ಅವರನ್ನು ನೇಮಕ ಮಾಡಿಲ್ಲ. ಯಾಕೆ ಸರ್ಕಾರ ಅವರನ್ನು ನೇಮಕ‌ ಮಾಡಿಲ್ಲ. ಈ ನಾಡಿನ ನೆಲ, ಜಲದ ಸಂಪನ್ಮೂಲ ನಾವು ಕಾಪಾಡಬೇಕಿದೆ. ಆದರೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ನೆಲ ಜಲಕ್ಕಿಂತ ಸಂಪನ್ಮೂಲದ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ ಎಂದು ಆರೋಪಿಸಿದರು.

ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿದೆ. ಕರ್ನಾಟಕ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿಯಲ್ಲಿ ಕನಿಷ್ಠ 10 ಲಕ್ಷಕ್ಕೂ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಭತ್ತ ಬೆಳೆಯಲು ಈ ಡ್ಯಾಂ ಅನುಕೂಲವಾಗಿದೆ. ಕಳೆದ ಎರಡು ವರ್ಷಗಳ ಬರದಿಂದ ರೈತರು ಸಂಕಷ್ಟದಲ್ಲಿದ್ದರು. ಈ ವರ್ಷ ಮಳೆಯಾಗಿ ತುಂಗಭದ್ರಾ ತುಂಬಿತ್ತು. ಇದರಿಂದ ಈ ಭಾಗದ ರೈತರು ತುಂಬ ಸಂತೋಷದಲ್ಲಿ ಇದ್ದರು. ಈ ಬಾರಿಯಾದರೂ ನಾವು ಎರಡು ಬೆಳೆ ಬೆಳೆಯಬಹುದು ಎಂದ ಸಂತೋಷದ ಗಳಿಗೆಯಲ್ಲಿ ತುಂಗಭದ್ರಾ ಜಲಾಶಯದ ಗೇಟು ಕಳಚಿ ಬಿದ್ದು ರೈತರಿಗೆ ದೊಡ್ಡ ಆಘಾತವನ್ನೇ ತಂದಿಟ್ಟಿದೆ. ಅಧಿಕಾರಿಗಳು ಸರಿಯಾದ ಸಮಯದಲ್ಲಿ ಡ್ಯಾಮ್ ನಿರ್ವಹಣೆಯ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ ಈ ಜವಾಬ್ದಾರಿ ರಾಜ್ಯ ಸರ್ಕಾರವೇ ಹೊಣೆಗಾರಿಕೆ ಹೊರಬೇಕು. ರಾಜ್ಯ ಸರ್ಕಾರ ಜವಾಬ್ದಾರಿಯನ್ನು ಹೊರದಿದ್ದರೆ ಯಾರ ಮೇಲೆ ಹೊಣೆಗಾರಿಕೆ ಹಾಕುತ್ತೀರಿ ಎಂದರು.

ತುಂಗಭದ್ರಾ ಗೇಟ್ ಮುರಿದಿರುವುದರಿಂದ ರೈತರಿಗೆ ತುಂಬಾ ಸಂಕಷ್ಟ ಎದುರಾಗಿದೆ. ಎರಡು ಬೆಳೆ ಬೆಳೆಯುವ ಉತ್ಸಾಹದಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಭಾಗದ ರೈತರಿಗೆ ಪ್ರತಿ ಹೆಕ್ಟೇರಿಗೆ 50,000 ರೂ. ಪರಿಹಾರ ನೀಡಬೇಕು. ರಾಜ್ಯ ಸರ್ಕಾರವು ತುಂಗಭದ್ರಾ ಗೇಟ್ ದುರಸ್ತಿಯ ಕಾರ್ಯದ ನೆಪದಲ್ಲಿ ಪ್ರತಿನಿತ್ಯ 98 ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿ ಬಿಡಲಾಗುತ್ತಿದೆ. ರಾಜ್ಯ ಸರ್ಕಾರದ ಹೊಣೆಗೇಡಿತನದಿಂದ ಹೀಗಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಹೊಣೆಗಾರಿಕೆಯಿಂದ ಜಾರಿಕೊಳ್ಳುವುದು ತರವಲ್ಲ. ಪ್ರತಿ ವರ್ಷವೂ ತಜ್ಞರ ತಂಡ ರಾಜ್ಯ ಸರಕಾರಕ್ಕೆ ಸಲಹೆ ಹಾಗೂ ವರದಿಯನ್ನು ಕೊಡುತ್ತದೆ. ಆ ವರದಿ ಅನುಸಾರ ಸರ್ಕಾರ ಯಾವ ಕ್ರಮ ಕೈಗೊಂಡಿದೆ. ತುಂಗಭದ್ರಾ ಬೋರ್ಡ್ ಕೇಂದ್ರ ಸರ್ಕಾರದ ಆಧೀನದಡಿ ಬರುತ್ತದೆಂಬ ಆಪಾದನೆ ಮಾಡುವುದಕ್ಕಿಂತ ರೈತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ನೆರವಾಗಬೇಕು ಎಂದರು.

ಸಚಿವ ಶಿವರಾಜ್ ತಂಗಡಗಿ ರಾಜಕಾರಣದ ಹೇಳಿಕೆ ವಿಚಾರ, ನಾವು ಈ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಲು ಬಂದಿಲ್ಲ. ನಾವು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ರೈತರ ಹಿತಾಸಕ್ತಿಯ ದೃಷ್ಟಿಯಿಂದ ಬಂದಿದ್ದೇವೆ. ರೈತರ ಹಿತದೃಷ್ಟಿಯಿಂದ ಅವರ ಸಂಕಷ್ಟವನ್ನು ನಿವಾರಿಸಬೇಕು ಎನ್ನುವ ಒತ್ತಾಯವನ್ನು ಮಾಡುತ್ತಿದ್ದೇವೆ. ನಾವು ಯಾರ ಮೇಲೇನು ಆರೋಪ ಮಾಡುತ್ತಿಲ್ಲ ಎಂದರು.

ಈ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಇತರರು ಇದ್ದರು.