ಮನೆ ಮನರಂಜನೆ ಮಂಡ್ಯ: ಕಿರುತೆರೆ ನಟ ಎಂ.ರವಿ ಪ್ರಸಾದ್‌ ನಿಧನ

ಮಂಡ್ಯ: ಕಿರುತೆರೆ ನಟ ಎಂ.ರವಿ ಪ್ರಸಾದ್‌ ನಿಧನ

0

ಮಂಡ್ಯ(Mandya): ರಂಗಭೂಮಿ, ಕಿರುತೆರೆ ನಟ ಎಂ.ರವಿ ಪ್ರಸಾದ್‌ (43) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ.

ಅನಾರೋಗ್ಯದಿಂದಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಸೇರಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಇಬ್ಬರು ತಂಗಿಯರು ಇದ್ದಾರೆ.

ಮಂಡ್ಯದ ಗೆಳೆಯರ ಬಳಗ, ಜನದನಿ ತಂಡಗಳ ಮೂಲಕ ರಂಗಕ್ಷೇತ್ರಕ್ಕೆ ಕಾಲಿಟ್ಟಿದ್ದರು. ನಂತರ ಕಿರುತೆರೆ ಧಾರಾವಾಹಿ, ಸಿನಿಮಾಗಳಲ್ಲಿ ಅಭಿನಯಿಸಿ ‘ಮಂಡ್ಯ ರವಿ’ ಎಂದೇ ಪ್ರಸಿದ್ಧಿ ಪಡೆದಿದ್ದರು.

ಎಂ.ಎ ಇಂಗ್ಲಿಷ್, ಎಲ್ಎಲ್.ಬಿ ಪದವಿ ಪಡೆದಿದ್ದ ಅವರು ನಟನಾ ಕ್ಷೇತ್ರವನ್ನೇ ವೃತ್ತಿಯಾಗಿ ಸ್ವೀಕರಿಸಿದ್ದರು. ಟಿ.ಎಸ್. ನಾಗಾಭರಣ ನಿರ್ದೇಶನದ ‘ಮಹಾಮಾಯಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಟಿ.ಎನ್‌.ಸೀತಾರಾಮ್‌ ಅವರ ಬಹುತೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಮಿಂಚು, ಮುಕ್ತ ಮುಕ್ತ, ಮಗಳು ಜಾನಕಿ, ಚಿತ್ರಲೇಖ, ಯಶೋಧೆ, ವರಲಕ್ಷ್ಮಿ ಸ್ಟೋರ್ಸ್‌ ಮುಂತಾದ ಧಾರಾವಾಹಿಗಳು ಹೆಸರು ತಂದುಕೊಟ್ಟಿದ್ದವು. ‘ಮಗಳು ಜಾನಕಿ’ ಯಲ್ಲಿ ‘ಚಂದು ಬಾರ್ಗಿ’ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಕಾಫಿ ತೋಟ ಸೇರಿದಂತೆ ಹಲವು ಸಿನಿಮಾಗಳಲ್ಲೂ ರವಿ ನಟಿಸಿದ್ದರು.

 ಅಂತ್ಯಕ್ರಿಯೆ ನಗರದ ಕಲ್ಲಹಳ್ಳಿಯಲ್ಲಿರುವ ರುದ್ರಭೂಮಿಯಲ್ಲಿ ಗುರುವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಿಂದಿನ ಲೇಖನಟಿ20 ಸರಣಿ: ಆಸ್ಟ್ರೇಲಿಯಾ ತಂಡದಿಂದ ಹೊರಗುಳಿಯಲಿರುವ ಮಾರ್ಷ್​, ಸ್ಟಾರ್ಕ್​, ಸ್ಟೋಯ್ನಿಸ್​
ಮುಂದಿನ ಲೇಖನಯುವಕರು ಬೆಳೆದಷ್ಟು ದೇಶ ಬೆಳೆಯುತ್ತದೆ: ಇಂದರ್ ಇಕ್ಬಲ್ ಸಿಂಗ್ ಅತ್ವಲ್