ಮನೆ ರಾಷ್ಟ್ರೀಯ ಇಂಡಿಗೋ ವಿಮಾನದಲ್ಲಿ ಅಶಿಸ್ತು ತೋರಿದ ಇಬ್ಬರ ಬಂಧನ

ಇಂಡಿಗೋ ವಿಮಾನದಲ್ಲಿ ಅಶಿಸ್ತು ತೋರಿದ ಇಬ್ಬರ ಬಂಧನ

0

ಮುಂಬೈ: ಇಂಡಿಗೋ ವಿಮಾನದಲ್ಲಿ ಮದ್ಯಪಾನ ಮಾಡಿ ಗಲಾಟೆ ನಡೆಸಿ, ಅಶಿಸ್ತು ತೋರಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.

ದುಬೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರಿಬ್ಬರು ಮದ್ಯದ ಮತ್ತಿನಲ್ಲಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರನ್ನು ನಿಂದಿಸಿದ್ದಲ್ಲದೇ, ಅಶಿಸ್ತಿನಿಂದ ವರ್ತಿಸಿದ್ದಾರೆ. ಅಮಲೇರಿಸಿಕೊಂಡು ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಲಾಗಿದೆ.

ಬುಧವಾರ ದುಬೈನಿಂದ ವಿಮಾನವು ಮುಂಬೈಗೆ ಬಂದಿಳಿಯಿತು. ನಂತರ ಆ ಇಬ್ಬರು ಅಶಿಸ್ತಿನ ಪ್ರಯಾಣಿಕರನ್ನು ಬಂಧಿಸಲಾಯಿತು. ಬಳಿಕ ಅವರನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ಜಾಮೀನು ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇಬ್ಬರು ಆರೋಪಿಗಳು ಪಾಲ್ಘರ್ ಮತ್ತು ಕೊಲ್ಹಾಪುರದ ನಲಸೋಪಾರದವರು ಎಂದು ಗುರುತಿಸಲಾಗಿದೆ. ದುಬೈನಲ್ಲಿ 1 ವರ್ಷದಿಂದ ಯಾವುದೋ ಕೆಲಸ ಮಾಡಿಕೊಂಡು ಅಲ್ಲಿಯೇ ನೆಲೆಸಿದ್ದರು. ತವರಿಗೆ ಹಿಂದಿರುಗುತ್ತಿದ್ದ ವೇಳೆ ಅವರು ಮದ್ಯ ಸೇವನೆ ಮಾಡಿದ್ದರು. ವಿಮಾನದಲ್ಲಿ ಸಹ ಪ್ರಯಾಣಿಕರ ಜೊತೆಗೆ ತಗಾದೆ ತೆಗೆದಿದ್ದಾರೆ. ಈ ವೇಳೆ ವಾಗ್ವಾದ ಶುರುವಾಗಿದೆ. ಮಧ್ಯಪ್ರವೇಶಿಸಿದ ವಿಮಾನ ಸಿಬ್ಬಂದಿಯನ್ನೂ ಅವರು ನಿಂದಿಸಿದ್ದಾರೆ.ಇಬ್ಬರು ವಿಮಾನದಲ್ಲೂ ಮದ್ಯಸೇವನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಳಿಕ ವಿಮಾನ ಸಿಬ್ಬಂದಿ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಮಾನ ಮುಂಬೈಗೆ ಬಂದಿಳಿದ ಬಳಿಕ ಅವರನ್ನು ಬಂಧಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದು) ಮತ್ತು ವಿಮಾನ ನಿಯಮಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಹರ್ ಪೊಲೀಸ್ ಠಾಣಾಧಿಕಾರಿ ತಿಳಿಸಿದರು.

ಹಿಂದಿನ ಲೇಖನ‘ಮೋದಿ’ ಉಪನಾಮ ಕುರಿತು ಅಪಮಾನ: ರಾಹುಲ್ ಗಾಂಧಿ ತಪ್ಪಿತಸ್ಥ
ಮುಂದಿನ ಲೇಖನಹುರೂನ್ ಗ್ಲೋಬಲ್ ರಿಚ್ ಲಿಸ್ಟ್ 2023 ವರದಿ: ಮುಂಬೈನಲ್ಲಿ 66 ಬಿಲಿಯನೇರ್