ಬೆಂಗಳೂರು : ಬ್ಯಾಂಕ್ ನಿಂದ ಹಣ, ಚಿನ್ನಾಭರಣ ಕೊಂಡೊಯ್ಯುವರ ಗಮನ ಬೇರೆಡೆ ಸೆಳೆದು ದೋಚುತ್ತಿದ್ದ ಇಬ್ಬರು ಆರೋಪಿಗಳನ್ನ ಕೆ.ಆರ್.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋಪಿ ಹಾಗೂ ಅಖಿಲ್ ಬಂಧಿತರು.
ನವೆಂಬರ್ 29ರಂದು ಬ್ಯಾಂಕ್‌ವೊಂದರಿಂದ 4 ಲಕ್ಷ ರೂ. ಡ್ರಾ ಮಾಡಿಕೊಂಡು ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದ ಆರೋಪಿಗಳು, ಟಿ.ಸಿ ಪಾಳ್ಯ ಬಳಿ ”ಕಾರಿನ ವೀಲ್ ಪಂಚರ್ ಆಗಿದೆ” ಎಂದು ತಿಳಿಸಿರುತ್ತಾರೆ. ಕಾರು ಚಾಲಕ ಪಕ್ಕದಲ್ಲಿದ್ದ ಶಾಪ್‌ನಲ್ಲಿ ಪಂಚರ್ ಹಾಕಿಸಿ ಹಣ ಕೊಡಲು ಶಾಪ್ ಒಳಗಡೆ ಹೋದಾಗ ಕ್ಷಣ ಮಾತ್ರದಲ್ಲಿ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿಟ್ಟಿದ್ದ 4 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದರು. ಹಣ ಕಳೆದುಕೊಂಡ ಕಾರು ಚಾಲಕ ನೀಡಿದ ದೂರಿನ ಅನ್ವಯ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳ ಮನೆಯಲ್ಲಿಟ್ಟಿದ್ದ 10 ಲಕ್ಷ ರೂ. ನಗದು, 2 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.
ಇದೇ ಆರೋಪಿಗಳು ಕಳೆದ ಮೇ 16ರಂದು ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾಂಕ್ ನಿಂದ ಚಿನ್ನಾಭರಣ ಕೊಂಡೊಯ್ಯುತ್ತಿದ್ದ ವ್ಯಕ್ತಿಯಿಂದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು. ಕೆ.ಆರ್.ಪುರಂ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನ ಬಾಡಿ ವಾರಂಟ್ ಆಧಾರದಲ್ಲಿ ವಶಕ್ಕೆ ಪಡೆದಿದ್ದ ಕೊತ್ತನೂರು ಠಾಣೆ ಪೊಲೀಸರು, ಆರೋಪಿತರು ಮನೆಗಳಲ್ಲಿಟ್ಟಿದ್ದ 324 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ 1.10 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ಐವರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.