ಮಂಡ್ಯ(Mandya): ಮಂಡ್ಯ ಕೇಂದ್ರ ಕಾರಾಗೃಹದೊಳಗೆ ಗಾಂಜಾ ಮತ್ತು ಮೊಬೈಲ್ ಎಸೆಯುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಆತನ ಬಳಿ 6 ಮೊಬೈಲ್ ಗಳು ದೊರೆತಿವೆ. ಜೈಲಿನ ಒಳಗೆ ಗಾಂಜಾ ಮತ್ತು 2 ಮೊಬೈಲ್ ದೊರೆತಿದೆ.
ಘಟನೆ ವಿವರ: ಕಾರಾಗೃಹದ ಕಾಂಪೌಂಡ್ ಹೊರಗಿನಿಂದ ಒಳಭಾಗಕ್ಕೆ ನಿಷೇಧಿತ ವಸ್ತುಗಳನ್ನು ಎಸೆಯಲಾಗುತ್ತಿದೆ. ಎಂಬ ಕಾರಣದಿಂದಾಗಿ ಅಧಿಕಾರಿಗಳು ಆಗಿಂದ್ದಾಗ್ಗೆ ಜೈಲಿನ ಹೊರಗೂ ಪಹರೆ ತಿರುಗುತ್ತಾರೆ. ಜು. 23ರಂದು ಬೆಳಗ್ಗೆ 10.15ರ ಸುಮಾರಿನಲ್ಲಿ ಕಾರಾಗೃಹದ ವೀಕ್ಷಕ ಕಾರ್ತಿಕ್ ಅವರು ಪಹರೆ ಮಾಡುತ್ತಿದ್ದಾಗ ಮಂಡ್ಯ ಜಿಲ್ಲೆ ಹಾಲಹಳ್ಳಿಕೆರೆ ಗ್ರಾಮದ ಎಸ್. ಚಂದ್ರಶೇಖರ್ ಎಂಬಾತ ಸಿಕ್ಕಿಬಿದ್ದಿದ್ದಾನೆ.
ಆತನನ್ನು ಹಿಡಿದು ವಿಚಾರಿಸಿದಾಗ ಕಾರಾಗೃಹದೊಳಗೆ ಮೊಬೈಲ್ ಮತ್ತು ಗಾಂಜಾ ಎಸೆದಿದ್ದಾಗಿ ತಿಳಿಸಿದ್ದಾನೆ. ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಹೊಸಹಳ್ಳಿ ಗ್ರಾಮದ ಸತೀಶ್ ಚಂದ್ರ ಎಂಬಾತನನ್ನು ತಡೆದು ಪರಿಶೀಲಿಸಿದಾಗ ಆತನ ಬಳಿ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿದ್ದ ಗಾಂಜಾ ಮತ್ತು 5 ಸ್ಯಾಮ್ ಸಂಗ್ ಮೊಬೈಲ್ ಹಾಗೂ ಒಂದು ನೋಕಿಯಾ ಮೊಬೈಲ್ ಪತ್ತೆಯಾಗಿದೆ.
ಇವರಿಬ್ಬರನ್ನು ವಿಚಾರಣೆಗೊಳಪಡಿಸಿದಾಗ ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿಗಳಾದ ಧನುಷ್ ಮತ್ತು ಸ್ವರೂಪ್ ಗೌಡ ಎಂಬುವರು ತಮಗೆ ಕರೆ ಮಾಡಿ ಮೊಬೈಲ್ ಹಾಗೂ ಗಾಂಜಾ ಕಾರಾಗೃಹದೊಳಗೆ ಎಸೆಯುವಂತೆ ತಿಳಿಸಿದ್ದರು. ಅದಕ್ಕಾಗಿ ಅವರು ನಮಗೆ ಹಣವನ್ನು ಸಂದಾಯವಾಗುವಂತೆ ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದ ಮೇರೆಗೆ ಅಧಿಕಾರಿಗಳು ಈ ಇಬ್ಬರೂ ಕೈದಿಗಳಿರುವ ಎ ಬ್ಯಾಂಕ್ ನ ಎ-2 ಕೊಠಡಿ ತಪಾಸಣೆ ನಡೆಸಿದಾಗ ಕೊಠಡಿಯ ಶೌಚಾಲಯ ಬಳಿ 2 ಮೊಬೈಲ್ ಪತ್ತೆಯಾಗಿದೆ.
ಈ ಸಂಬಂಧ ವಿಚಾರಣಾಧೀನ ಕೈದಿಗಳಾದ ಧನುಷ್, ಸ್ವರೂಪ್ ಗೌಡ ಹಾಗೂ ಕಾರಾಗೃಹದೊಳಗೆ ಗಾಂಜಾ ಮತ್ತು ಮೊಬೈಲ್ ಎಸೆಯುತ್ತಿದ್ದ ಚಂದ್ರಶೇಖರ್, ಸತೀಶ್ ಚಂದ್ರ ವಿರುದ್ಧ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.