ಬೆಂಗಳೂರು(Bengaluru): ಪಾರ್ಟಿ ನೆಪದಲ್ಲಿ ಸ್ನೇಹಿತೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ವಿವೇಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆದಿತ್ಯ ಮತ್ತು ಅಜಯ್ ಬಂಧಿತ ಆರೋಪಿಗಳು.
ನೊಂದ ಯುವತಿಯರು ಹಾಗೂ ಆರೋಪಿ ಯುವಕರು ಉತ್ತರ ಭಾರತದ ಖಾಸಗಿ ಯೂನಿವರ್ಸಿಟಿಯಲ್ಲಿ ಸಹಪಾಠಿಗಳಾಗಿದ್ದು, ಸದ್ಯ ಬೆಂಗಳೂರಿನ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ.
ಘಟನೆ ವಿವರ:
ಆರೋಪಿಗಳು ಫೆಬ್ರವರಿ 5ರ ರಾತ್ರಿ ಪಾರ್ಟಿ ಮಾಡುವ ನೆಪದಲ್ಲಿ ಸ್ನೇಹಿತೆಯರನ್ನು ತಾವು ವಾಸವಿರುವ ವಿವೇಕನಗರದ ಏರಿಯೊಂದಕ್ಕೆ ಕರೆಸಿಕೊಂಡಿದ್ದರು. ಮಧ್ಯರಾತ್ರಿ 2 ಗಂಟೆಯವರೆಗೂ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಮದ್ಯದ ಅಮಲಿನಲ್ಲಿ 20 ವರ್ಷದ ಯುವತಿಯ ಮೇಲೆ ಓರ್ವ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಷ್ಟೇ ಅಲ್ಲ, ಮತ್ತೋರ್ವ ಯುವತಿಯ ಖಾಸಗಿ ಭಾಗಗಳನ್ನು ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಾಗಿತ್ತು.
ಸ್ನೇಹಿತರಿಬ್ಬರ ವಿಕೃತಿಗೆ ನೊಂದು ಬಾತ್’ರೂಮ್’ನಲ್ಲಿ ಲಾಕ್ ಮಾಡಿಕೊಂಡ ಯುವತಿಯರು ಸೋಮವಾರ ಬೆಳಗ್ಗೆ ವಿವೇಕನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ವಿವೇಕನಗರ ಠಾಣಾ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.