ಕೋಲಾರ: ಕೋಲಾರ ಜಿಲ್ಲೆಯಲ್ಲಿ ಸೋಮವಾರ ನಡೆದ ಎರಡು ಭೀಕರ ರಸ್ತೆ ಅಪಘಾತಗಳಲ್ಲಿ ಐವರು ದುರ್ಮರಣಕ್ಕೊಳಗಾಗಿದ್ದು, ಹಲವರಿಗೆ ಗಂಭೀರ ಗಾಯವಾಗಿದೆ. ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಈ ಎರಡು ಘಟನೆಗಳು ಸಂಭವಿಸಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕೃಷ್ಣಾವರಂ ಬಳಿ ಸೋಮವಾರ ಮಧ್ಯಾಹ್ನದ ವೇಳೆಗೆ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.
ಮೃತರನ್ನು ಆಕಾಶ್ (33), ಜಾನ್ (22) ಮತ್ತು ಅಪ್ಪು ಅಲಿಯಾಸ್ ಭಾಸ್ಕರ್ ಎಂದು ಗುರುತಿಸಲಾಗಿದೆ. ಅಪಘಾತದ ತಕ್ಷಣವೇ ಆಕಾಶ್ ಹಾಗೂ ಜಾನ್ ಸ್ಥಳದಲ್ಲೇ ಮೃತಪಟ್ಟರೆ, ಭಾಸ್ಕರ್ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಕೂಡ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ತಮಿಳರಸನ್, ನಾಗರಾಜು ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ದಾರುಣ ಅಪಘಾತ ಬೆಳಗ್ಗೆ ಕೋಲಾರದ ಮಾಲೂರು ತಾಲೂಕಿನ ಎಡಗಿನಬೆಲೆ ಟೋಲ್ ಗೇಟ್ ಬಳಿ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಸಂಭವಿಸಿದೆ. ಇಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದಿದ್ದು, ರಾಜಸ್ಥಾನ ಮೂಲದ ಅಶೋಕ್ (28) ಮತ್ತು ಮೋಹನ್ ಲಾಲ್ (32) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಎಷ್ಟು ತೀವ್ರವಾಗಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮಾಲೂರು ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಲಾಗಿದೆ.














