ವಿಶ್ವಸಂಸ್ಥೆ/ನವದೆಹಲಿ(NewDelhi): ಕಾಂಗೋದಲ್ಲಿ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ ಪರಿಣಾಮ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಬಿಎಸ್ಎಫ್ ಯೋಧರು ಮೃತಪಟ್ಟಿದ್ದಾರೆ.
ಮಧ್ಯ ಆಫ್ರಿಕಾದ ಕಾಂಗೋದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ 50 ಜನರು ಗಾಯಗೊಂಡಿದ್ದಾರೆ.
ಪ್ರಜಾಸತ್ತಾತ್ಮಕ ಗಣರಾಜ್ಯವಾದ ಕಾಂಗೋದಲ್ಲಿ ಸಶಸ್ತ್ರ ಬಂಡುಕೋರ ಗುಂಪುಗಳ ದಾಳಿ ಹೆಚ್ಚುತ್ತಿದ್ದು ಇದನ್ನು ತಡೆಯಲು ಅಲ್ಲಿನ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದೊಡ್ಡ ಪ್ರತಿಭಟನೆಗಳನ್ನು ನಡೆಸುತ್ತಿದ್ದರು.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಈ ಕುರಿತು ಮಾಹಿತಿ ನೀಡಿದ್ದು, ಇಬ್ಬರು ಭಾರತೀಯ ಯೋಧರು ಹುತಾತ್ಮರಾದ ಬಗ್ಗೆ ಖಚಿತಪಡಿಸಿದ್ದಾರೆ. ಅತಿರೇಕದ ದಾಳಿಯಲ್ಲಿ ವೀರ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮೃತ ಬಿಎಸ್ಎಫ್ ಯೋಧರು ಹೆಡ್ ಕಾನ್‌ಸ್ಟೇಬಲ್ ಶ್ರೇಣಿಯಲ್ಲಿದ್ದರು. ರಾಜಸ್ಥಾನ ಮೂಲದವರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಂಗೋದಲ್ಲಿ ನಾಗರಿಕ ಮತ್ತು ಭದ್ರತಾ ಸಮಸ್ಯೆಗಳು ಕಾಡುತ್ತಿವೆ. ಸಶಸ್ತ್ರ ಗುಂಪುಗಳು ಆಗಾಗ್ಗೆ ಸೇನೆಯ ಮೇಲೆ ದಾಳಿ ಮಾಡುವುದಲ್ಲದೇ, ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳುತ್ತಿವೆ. ಇದನ್ನು ತಡೆಯಲು ಕಾಂಗೋ ದೇಶದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸಲಾಗಿದೆ.