ದ್ವಿಪಾದ ಪ್ರಸರಣಾಸನ ಹೆಸರೇ ಸೂಚಿಸುವಂತೆ ಎರಡೂ ಕಾಲುಗಳು ಈ ಆಸನದಲ್ಲಿ ಹಿಂದಕ್ಕೆ ಚಾಚಿರುತ್ತವೆ.
ಮಾಡುವ ಕ್ರಮ:
1) ಎರಡೂ ಕಾಲುಗಳ ಪಾದಗಳನ್ನು ಜೋಡಿಸಿ, ಎದೆ ಎತ್ತಿ ನಮಸ್ಕಾರ ಮುದ್ರೆಯಲ್ಲಿ ಮೊದಲು ನಿಂತುಕೊಳ್ಳಬೇಕು.
2) ಅನಂತರ ದೀರ್ಘವಾದ ಉಸಿರನ್ನು ಒಳಕ್ಕೆ ಎಳೆದುಕೊಳ್ಳುತ್ತ ಕೈಗಳನ್ನು ಮೇಲಕ್ಕೆ (ಸೂರ್ಯ ನಮಸ್ಕಾರ ಸ್ಥಿತಿ ಎರಡರಂತೆ) ಎತ್ತಬೇಕು.
3) ಹೊಟ್ಟೆಯನ್ನು ಒಳಕ್ಕೆ ಎಳೆದುಕೊಂಡು ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಟ್ಟು ಮುಂದಕ್ಕೆ ಬಗ್ಗಿ, ಎರಡೂ ಕೈಗಳನ್ನು ಭೂಮಿಗೆ (ಸೂರ್ಯ ನಮಸ್ಕಾರ ಸ್ಥಿತಿ ಮೂರರಲ್ಲಿ ವಿವರಿಸಿದಂತೆ) ಕಾಲುಗಳನ್ನು ಬಗ್ಗಿಸದೇ ಸ್ವರ್ಶಿಸಬೇಕು.
4) ಅನಂತರ ಯಾವುದಾದರೂ ಒಂದು ಕಾಲನ್ನು ಹಿಂದಕ್ಕೆ ಚಾಚಿ, ಇನ್ನೊಂದನ್ನು ಎರಡೂ ಕೈಗಳ ನಡುವೆ ಇಟ್ಟು, ಬೆನ್ನು ಬಗ್ಗಿಸಿ, ತಲೆ ಹಿಂದಕ್ಕೆ ಎತ್ತಿ ಆಕಾಶ ನೋಡುತ್ತಿರಬೇಕು.
5) ಆಮೇಲೆ ಇನ್ನೊಂದು ಕಾಲನ್ನೂ ಹಿಂದಕ್ಕೆ ಚಾಚಿ, ಎರಡೂ ಕಾಲುಗಳನ್ನು ಒಂದೇ ರೀತಿ ಜೋಡಿಸಿ, ಇಡೀ ಶರೀರದ ಭಾರವನ್ನು ಎರಡೂ ಕಾಲುಗಳ ಬೆರಳುಗಳು ಮತ್ತು ಕೈಗಳ ಅಂಗೈ ಮೇಲೆ ಹೊರಿಸಬೇಕು. ಒಮ್ಮೆ ಚಿತ್ರದಲ್ಲಿರುವ ಸ್ಥಿತಿಯನ್ನು ತಲುಪಿದನಂತರ ಕ್ಷಣಕಾಲವಾದರೂ ಅದೇ ಸ್ಥಿತಿಯಲ್ಲಿರಬೇಕು.
ಲಾಭಗಳು:
ದ್ವಿಪಾದ ಪ್ರಸರಣಾಸನದಿಂದ ಎರಡೂ ಕೈಗಳು ಬಲಶಾಲಿಯಾಗುವುವು. ಬೆನ್ನು ನೀಳವಾಗಿಡಲು ಈ ಆಸನ ಹೆಚ್ಚು ಉಪಕಾರಿ. ತೊಡೆಗಳು ಬಲಿಷ್ಠವಾಗುವುವು.