ಬೆಳಗಾವಿ: ಚಲಿಸುತ್ತಿದ್ದ ಕಾರಿನ ಮೇಲೆ ಕಾಂಕ್ರಿಟ್ ಮಿಕ್ಸರ್ ಲಾರಿಯೊಂದು ಮುಗುಚಿ ಬಿದ್ದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಬಳಿ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ಕಾಂಕ್ರಿಟ್ ಲಾರಿ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಅಪ್ಪಚ್ಚಿಯಾಗಿದ್ದು, ಕಾರಿನೊಳಗೆ ಇಬ್ಬರು ಸಿಲುಕಿಕೊಂಡು ನರಳಾಡಿದ್ದಾರೆ. ತಮ್ಮನು ರಕ್ಷಿಸುವಂತೆ ಕೈ ಬೀಸಿ ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ರಕ್ಷಣೆ ಧಾವಿಸಿದ್ದಾರೆ. ಕಾರು ಅಪ್ಪಚ್ಚಿಯಾಗಿದ್ದರಿಂದ ಜನರಿಂದ ರಕ್ಷಣೆ ಸಾಧ್ಯವಾಗಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಎರಡು ಕ್ರೇನ್‌ಗಳನ್ನು ಸ್ಥಳಕ್ಕೆ ಕರೆಯಿಸಿ ಅದರ ಮೂಲಕ ಕಾರಿನ ಪಾರ್ಟ್ಸ್‌ಗಳನ್ನು ಬಿಡಿ ಬಿಡಿ ಮಾಡಿ, ಕಾರಿನಲ್ಲಿದ್ದ ಇಬ್ಬರನ್ನು ಹೊರತೆಗೆದು ರಕ್ಷಿಸಿದ್ದಾರೆ.
ಕಾರ್ಯಾಚರಣೆ ನಡೆಸುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಕ್ರೇನ್‌ಗಳನ್ನು ಸ್ಥಳಕ್ಕೆ ಕರೆಯಿಸಿ ಅದರ ಮೂಲಕ ಕಾರಿನ ಪಾರ್ಟ್ಸ್‌ಗಳನ್ನು ಬಿಡಿ ಬಿಡಿ ಮಾಡಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಬೆಳಗಾವಿ ನಗರ ಹೊರವಲಯದ ಕೆಎಲ್‌ಇ ಆಸ್ಪತ್ರೆ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ. ಆದರೂ ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಸಿಲುಕಿ ಹಾಕಿಕೊಂಡಿದ್ದವರನ್ನು ಪರಪ್ಪ ಬಾಳೆಕಾಯಿ, ನಿಂಗಪ್ಪ ಕೊಪ್ಪದ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಹೊರವಲಯದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕಂಟೈನರ್ ಲಾರಿ ಬಿದ್ದು ಒಂದೇ ಕುಟುಂಬದ ೬ ಮಂದಿ ಮೃತಪಟ್ಟಿದ್ದರು.