ಹುಬ್ಬಳ್ಳಿ: ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಇಂದು(ಮೇ.15) ಬೆಳಿಗ್ಗೆ ಅಂಜಲಿ ಅಂಬಿಗೇರ ಎಂಬ 21 ವರ್ಷದ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು.
ಈ ಹಿನ್ನಲೆ ರಜೆಯಲ್ಲಿದ್ದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು, ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ‘ಅಂಜಲಿ ಕೊಲೆ ಮಾಡಿದ ವಿಶ್ವ ಅಲಿಯಾಸ್ ಗಿರೀಶ್ ಪರಿಚಯಸ್ಥ. ಇಂದು ಮುಂಜಾನೆ ಅಂಜಲಿ ಅಂಬಿಗೇರಗೆ 4 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಕೊಲೆ ಮಾಡಿರುವ ಶಂಕೆ
‘ಅವರ ಮನೆಯವರ ದೂರಿನ ಪ್ರಕಾರ ಪ್ರೀತಿಸುವಂತೆ ಪೀಡಿಸುತ್ತಿದ್ದ. ಅಂಜಲಿ ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಪತ್ತೆಗಾಗಿ ಎರಡು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಜೊತೆಗೆ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ವಿರುದ್ಧ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಿವೆ. ಎಲ್ಲಾ ಆಯಾಮದಲ್ಲಿ ತನಿಖೆ ಮಾಡುತ್ತೇವೆ ಎಂದು ಹೇಳಿದರು.
ಇನ್ನು ಅಂಜಲಿ ಕುಟುಂಬ ಬೆಂಡಿಗೇರಿ ಠಾಣೆಗೆ ಬಂದಿರುವುದು ನಿಜ, ಈ ಕುರಿತು ಪೊಲೀಸ್ ಠಾಣೆಯ ಸಿಸಿಕ್ಯಾಮರಾ ದೃಶ್ಯಗಳಿವೆ. ಆದ್ರೆ, ಯಾವ ಕಾರಣಕ್ಕೆ ಬಂದಿದ್ದಾರೆ ಎನ್ನುವುದು ಸ್ಪಷ್ಟತೆ ಇಲ್ಲ. ಈ ಕುರಿತು ಸಿಬ್ಬಂದಿ ಅವರು ಬೇರೆ ಪ್ರಕರಣಕ್ಕೆ ಬಂದಿದ್ದರು ಎಂದು ಹೇಳುತ್ತಿದ್ದಾರೆ. ಈ ಬಗ್ಗೆಯೂ ತನಿಖೆ ಆರಂಭಿಸಿದ್ದೇವೆ. ಬೆಂಡಿಗೇರಿ ಠಾಣೆ ಸಿಬ್ಬಂದಿ ಲೋಪದೋಷವಿದ್ರೆ ಕ್ರಮ ಕೈಗೊಳ್ಳುತ್ತೆವೆ ಎಂದು ಹು-ಧಾ ನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಖಡಕ್ ಉತ್ತರ ನೀಡಿದರು.
ಇದೇ ವೇಳೆ ಹುಬ್ಬಳ್ಳಿ-ಧಾರವಾಡದಲ್ಲಿ ದೌರ್ಜನ್ಯ ಪ್ರಕರಣ ಹೆಚ್ಚುತ್ತಿರುವ ವಿಚಾರ, ‘ ಶಾಲಾ-ಕಾಲೇಜು, ಮಹಿಳೆಯರು ಸೇರುವ ಸ್ಥಳಗಳಲ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಹಲವು ಸಂಘ-ಸಂಸ್ಥೆಗಳ ಮುಖ್ಯಸ್ಥರ ಜೊತೆಯೂ ಸಭೆ ನಡೆಸಲಾಗುತ್ತಿದ್ದು, ಮಕ್ಕಳ ಪಾಲಕರ ಜೊತೆಗೂ ಚರ್ಚಿಸಿ ಅರಿವು ಮೂಡಿಸಲಾಗುತ್ತಿದೆ. ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಸ್ಪಷ್ಟಪಡಿಸಿದರು.