ಮನೆ ಅಂತಾರಾಷ್ಟ್ರೀಯ ಎರಡು ದುರಂತ – ಅಮೆರಿಕ ನೌಕಾಪಡೆಯ ಹೆಲಿಕಾಪ್ಟರ್, ಫೈಟರ್ ಜೆಟ್ ಪತನ

ಎರಡು ದುರಂತ – ಅಮೆರಿಕ ನೌಕಾಪಡೆಯ ಹೆಲಿಕಾಪ್ಟರ್, ಫೈಟರ್ ಜೆಟ್ ಪತನ

0

ವಾಷಿಂಗ್ಟನ್‌/ಬೀಜಿಂಗ್‌ : ದಕ್ಷಿಣ ಚೀನಾ ಸಮುದ್ರದಲ್ಲಿ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ ಅಮೆರಿಕ ನೌಕಾಪಡೆಯ ಒಂದು ಹೆಲಿಕಾಪ್ಟರ್‌, ಒಂದು ಫೈಟರ್‌ ಜೆಟ್‌ ಪತನಗೊಂಡಿದೆ. ಈ ಘಟನೆಯಲ್ಲಿ ಎಲ್ಲಾ ಐವರು ಸೇನಾ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಮೊದಲ ಅಪಘಾತ ಭಾನುವಾರ 2:45ರ ಸುಮಾರಿಗೆ ನಡೆದಿದೆ. ʻಬ್ಯಾಟಲ್ ಕ್ಯಾಟ್ಸ್ʼ ಸ್ಕ್ವಾಡ್ರನ್-73ಕ್ಕೆ ಸೇರಿದ MH-60R ಸೀ ಹಾಕ್ ಹೆಲಿಕಾಪ್ಟರ್ ವಿಮಾನವಾಹಕ ನೌಕೆ USS ನಿಮಿಟ್ಜ್ ನಿಂದ ಹೊರಟು ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಅಪಘಾತಕ್ಕೀಡಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಕ್ಯಾರಿಯರ್‌ ಸ್ಟ್ರೈಕ್‌ ಗ್ರೂಪ್‌-11 ಹಾಗೂ ನೌಕಾಪಡೆಯ ರಕ್ಷಣಾ ತಂಡಗಳು ತ್ವರಿತ ಕಾರ್ಯಾಚರಣೆ ಶುರು ಮಾಡಿದ್ದವು. ಈ ವೇಳೆ ಮೂವರು ಸಿಬ್ಬಂದಿಯನ್ನ ರಕ್ಷಣೆ ಮಾಡಿದವು.

ಇದಾದ 30 ನಿಮಿಷಗಳಲ್ಲೇ ಮಧ್ಯಾಹ್ನ 3:15ರ ಸುಮಾರಿಗೆ 2ನೇ ದುರಂತ ನಡೆದಿದೆ. ʻಫೈಟಿಂಗ್ ರೆಡ್‌ಹಾಕ್ಸ್ʼ ಸ್ಕ್ವಾಡ್ರನ್ 22ರ F/A-18F ಸೂಪರ್ ಹಾರ್ನೆಟ್ ಫೈಟರ್ ಜೆಟ್ ಸಹ ಅದೇ ವಿಮಾನವಾಹಕ ನೌಕೆಯಿಂದ ಟೇಕಾಫ್ ಆಗಿ, ಬಳಿಕ ಸಮುದ್ರಕ್ಕೆ ಅಪ್ಪಳಿಸಿತು. ಜೆಟ್‌ನಲ್ಲಿದ್ದ ಇಬ್ಬರು ಫೈಟರ್‌ ಪೈಲಟ್‌ಗಳು ಪ್ಯಾರಾಚೂಚ್‌ ಮೂಲಕ ಜೀವ ಉಳಿಸಿಕೊಂಡರು.

ಎರಡೂ ದುರಂತಗಳಲ್ಲಿ ಎಲ್ಲಾ ಐವರು ಸಿಬ್ಬಂದಿಯನ್ನ ರಕ್ಷಣೆ ಮಾಡಲಾಗಿದ್ದು, ವೈದ್ಯಕೀಯ ಪರೀಕ್ಷೆ ಕಳಿಸಲಾಗಿದೆ ಎಂದು ಅಮೆರಿಕ ನೌಕಾಪಡೆ ಹೇಳಿದೆ. ಎರಡೂ ಅಪಘಾತಕ್ಕೆ ನಿಖರ ಕಾರಣಗಳ ಬಗ್ಗೆ ಅಮೆರಿಕ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.