ಬೆಳಗಾವಿ(Belagavi): ಕ್ಷುಲ್ಲಕ ಕಾರಣಕ್ಕೆ ಬೆಳಗಾವಿಯ ಹೊರ ವಲಯದಲ್ಲಿರುವ ಶಿಂದೊಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಹೊನಲು ಬೆಳಕಿನ ಕಬಡ್ಡಿ ಆಡುತ್ತಿದ್ದ ಇಬ್ಬರು ಯುವಕರನ್ನು ಹತ್ಯೆಗೈದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬಸವರಾಜ್ ಬೆಳಗಾಂವ್ಕರ್ (22), ಗಿರೀಶ ನಾಗಣ್ಣವರ (22) ಹತ್ಯೆಯಾದವರು.
ಘಟನೆ ವಿವರ: ಗ್ರಾಮದಲ್ಲಿ ತಡರಾತ್ರಿ ನಡೆಯುತ್ತಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯುವ ಸಮಯದಲ್ಲಿ ಹಾಲಿನ ಡೇರಿಯ ವಾಹನ ಓಡಿಸುವ ಚಾಲಕ ಇದೇ ಸ್ಥಳಕ್ಕೆ ಬಂದು ವಾಹನ ನಿಲ್ಲಿಸಿದ.
ಈ ವೇಳೆ ಕ್ರಿಕೆಟ್ ಆಡುವ ಇಬ್ಬರು ಯುವಕರು ಹಾಗೂ ವಾಹನ ಚಾಲಕನ ಮಧ್ಯೆ ಮಾತಿಗೆ ಮಾತು ಬೆಳೆಯಿತು.
ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಒಬ್ಬರಿಗೊಬ್ಬರು ಹೊಡೆದಾಡತೊಡಗಿದರು.ಇದರ ಮಧ್ಯೆಯೇ ತನ್ನ ಬಳಿ ಇದ್ದ ಚಾಕು ತಂದ ಡೇರಿ ವಾಹನದ ಚಾಲಕ ಇಬ್ಬರೂ ಯುವಕರ ಮೇಲೆ ಹಲ್ಲೆ ಮಾಡಿದ. ಮನಸೋ ಇಚ್ಛೆ ಚುಚ್ಚಿದ ಎಂದು ಜತೆಯಲ್ಲಿದ್ದವರು ಮಾಹಿತಿ ನೀಡಿದ್ದಾರೆ.
ತೀವ್ರ ರಕ್ತಸ್ರಾವದಿಂದ ಬಳಲಿದ ಯುವಕರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆ ಮುಟ್ಟುವುದರಲ್ಲಿ ಇಬ್ಬರೂ ಕೊನೆಯುಸಿರೆಳೆದಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೃತದೇಹಗಳನ್ನು ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಡಿಸಿಪಿ ರವೀಂದ್ರ ಗಡಾಡಿ, ಎಸಿಪಿ ನಾರಾಯಣ ಬರಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೆಎಸ್’ಆರ್’ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.