ಅಹಮದಾಬಾದ್(Ahmadabad) : ಅಸರ್ವಾ-ಉದಯಪುರ ಎಕ್ಸ್’ಪ್ರೆಸ್ ರೈಲು ಹಾದುಹೋಗುವ ಕೆಲವು ಗಂಟೆಗಳ ಮೊದಲು ಭಾನುವಾರ ಉದಯಪುರದ ರೈಲ್ವೆ ಹಳಿಯಲ್ಲಿ ಸ್ಫೋಟ ಸಂಭವಿಸಿದೆ.
ಉದಯಪುರದ ಜವಾರ್ ಮೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕೆವ್ಡಾ ಕಿ ನಾಲ್ ಬಳಿಯ ಓಧಾ ಸೇತುವೆಯಲ್ಲಿ ಸ್ಫೋಟ ಸಂಭವಿಸಿದ್ದು, ಇದಕ್ಕೆ ಗಣಿ ಸ್ಫೋಟಕಗಳನ್ನು ಬಳಸಲಾಗಿದೆ. ಘಟನೆ ಕುರಿತಂತೆ ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಠಾಣಾಧಿಕಾರಿ ಅನಿಲ್ ಕುಮಾರ್ ಬಿಷ್ಣೋಯಿ, ಸ್ಥಳೀಯರು ಬೆಳಿಗ್ಗೆ ಸ್ಫೋಟದ ಬಗ್ಗೆ ನಮಗೆ ಮಾಹಿತಿ ನೀಡಿದರು. ನಾವು ಹಳಿಯಲ್ಲಿ ಕೆಲವು ಸ್ಫೋಟಕಗಳನ್ನು ಪತ್ತೆಮಾಡಿದ್ದೇವೆ. ದುಷ್ಕರ್ಮಿಗಳ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಉದಯಪುರದಿಂದ ಸುಮಾರು 35 ಕಿ.ಮೀ ದೂರದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದ್ದು, ಸ್ಥಳಕ್ಕೆ ಎಟಿಎಫ್, ಎನ್‌ಐಎ ಮತ್ತು ಆರ್’ಪಿಎಫ್ ತಂಡಗಳನ್ನು ಕಳುಹಿಸಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ಸೇತುವೆ ಮರು ನಿರ್ಮಾಣ ತಂಡವು ಸ್ಥಳದಲ್ಲಿ ಕಾರ್ಯಾಚಾರಣೆ ನಡೆಸುತ್ತಿವೆ. ಘಟನೆಯು ಆತಂಕಕಾರಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹೇಳಿದ್ದು, ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಅವರಿಗೆ ಆದೇಶಿಸಿದ್ದಾರೆ.
ಕೇಂದ್ರೀಯ ಸಂಸ್ಥೆಗಳು ತನಿಖೆಗೆ ಸಹಕಾರ ನೀಡುತ್ತಿವೆ ಎಂದು ಡಿಜಿಪಿ ತಿಳಿಸಿದ್ದಾರೆ. ವಿಧಿ ವಿಜ್ಞಾನ, ಭಯೋತ್ಪಾದನೆ ನಿಗ್ರಹ ದಳವು(ಎಟಿಎಸ್) ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿವೆ.