ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಯುಜಿ ಸಿಇಟಿ ಪರೀಕ್ಷೆ ಫಲಿತಾಂಶ ಮೇ 24ರಂದು ಪ್ರಕಟಗೊಳ್ಳಲಿದೆ
ಮೇ 24ರಂದು ಬೆಳಿಗ್ಗೆ 11:30ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯ ವೇಳೆ ಫಲಿತಾಂಶ ಅಧಿಕೃತವಾಗಿ ಬಿಡುಗಡೆಗೊಳ್ಳಲಿದ್ದು, ನಂತರ ಮಧ್ಯಾಹ್ನ 2 ಗಂಟೆಯ ನಂತರ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳಾದ kea.kar.nic.in ಮತ್ತು cetonline.karnataka.gov.in ನಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.
ಈ ವರ್ಷ ಏಪ್ರಿಲ್ 15, 16 ಮತ್ತು 17ರಂದು ಯುಜಿ ಸಿಇಟಿ ಪರೀಕ್ಷೆಗಳು ರಾಜ್ಯದಾದ್ಯಂತ ನಡೆದಿದ್ದು, ಇಂಜಿನಿಯರಿಂಗ್, ಫಾರ್ಮಸಿ, ಅಗ್ರಿಕಲ್ಚರ್, ನರ್ಸಿಂಗ್ ಸೇರಿದಂತೆ ವಿವಿಧ ವ್ಯಾಸಂಗ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಒಟ್ಟು 3.30 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿದ್ದರು. ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸರಾಗವಾಗಿ ನಡೆದ ಈ ಪರೀಕ್ಷೆಯ ಫಲಿತಾಂಶ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ದಾರಿಗೆ ನಿದರ್ಶನವಾಗಲಿದೆ.














