ಬೆಂಗಳೂರು: ಪ್ರಸಕ್ತ 2024ರ ಯುಜಿ ವೈದ್ಯಕೀಯ ಸ್ಟ್ರೇ ವೇಕೆನ್ಸಿ ಸುತ್ತಿಗೆ ಲಭ್ಯವಾಗುವ ಸೀಟುಗಳಿಗೆ ಹಾಗೂ ಯುಜಿ ದಂತ ವೈದ್ಯಕೀಯ – ಆಯುಷ್ ಕೋರ್ಸುಗಳ ಪ್ರವೇಶಾತಿಗಾಗಿ ಮಾಪ್ ಅಪ್ ಸುತ್ತಿಗೆ ಅರ್ಹತೆ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 21ರಿಂದ 23ರವರೆಗೆ ಅವಕಾಶ ನೀಡಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾಹಿತಿ ನೀಡಿದ್ದು, ಈ ಅರ್ಜಿ ಸಲ್ಲಿಸಲು ಅವಕಾಶ ನೀಡಿ ಆನ್ ಲೈನ್ ಲಿಂಕ್ ತೆರೆಯಲಾಗಿದೆ. ಈವರೆಗೆ ಯುಜಿ ನೀಟ್ – 2024ಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ಮಾಪ್ ಅಪ್ ಸುತ್ತಿನಲ್ಲಿ ಲಭ್ಯವಾಗುವ ಸೀಟುಗಳಿಗೆ ಮಾತ್ರ ಇತರ ಅರ್ಹ ಅಭ್ಯರ್ಥಿಗಳೊಂದಿಗೆ ಭಾಗವಹಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ನಲ್ಲಿ ನಿಗದಿತ ಲಿಂಕ್ ಆಯ್ಕೆ ಮಾಡಿಕೊಂಡು ಅಕ್ಟೋಬರ್ 21ರಿಂದ 23ರ ರಾತ್ರಿ 11.59ರ ವರೆಗೆ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಅವಕಾಶವಿದೆ. ಈಗಾಗಲೇ ನೋಂದಾಯಿಸಿರುವ ಆದರೆ, ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸದೇ ಇರುವ ಅಭ್ಯರ್ಥಿಗಳು ಸಹ ಅರ್ಜಿಯನ್ನು ಪೂರ್ಣವಾಗಿ ಸಲ್ಲಿಸಬಹುದಾಗಿದೆ.
ಅರ್ಹತಾ ಮಾನದಂಡಗಳು ಯಾವುವು?: ಯುಜಿನೀಟ್-2024ರಲ್ಲಿ ನಿಗದಿಪಡಿಸಿರುವ ಕನಿಷ್ಠ ಅಂಕಗಳನ್ನು ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು ಮಾತ್ರ ಲಭ್ಯವಿರುವ ಸೀಟುಗಳಿಗೆ ಪ್ರಾಧಿಕಾರದ ಮೂಲಕ ಪ್ರವೇಶಕ್ಕೆ ನೋಂದಣಿ ಮಾಡಿಕೊಳ್ಳಲು ಅರ್ಹರಿರುತ್ತಾರೆ. ಪ.ಜಾ./ಪ.ಪಂ./ಒಬಿಸಿ ಅರ್ಹತಾ ಮಾನದಂಡಗಳು ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ. ಹೆಚ್ಚಿನ ವಿವರಕ್ಕೆ ಪ್ರಾಧಿಕಾರದ ವೆಬ್ಸೈಟ್ http://kea.kar.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.
ಯುಜಿನೀಟ್-24 ಮಾಪ್ ಅಪ್ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಸಮೇತ ಸಂಬಂಧಪಟ್ಟ ಕಾಲೇಜುಗಳಿಗೇ ಹೋಗಿ ವರದಿ ಮಾಡಿಕೊಳ್ಳಬೇಕು. ಅಂತಹವರು ದಾಖಲೆ ಸಲ್ಲಿಸಲು ಅಕ್ಟೋಬರ್ 21ರಂದು ಕೆಇಎ ಕಚೇರಿಗೆ ಬರುವ ಅಗತ್ಯ ಇಲ್ಲ ಎಂದು ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಶುಲ್ಕ ಪಾವತಿ ಮಾಡುವುದಕ್ಕೆ ಮತ್ತು ಕಾಲೇಜಿಗೆ ದಾಖಲೆ ಸಲ್ಲಿಸಿ ವರದಿ ಮಾಡಿಕೊಳ್ಳಲು ಅ.22ರವರೆಗೂ ಅವಕಾಶವಿದೆ ಎಂದಿದ್ದಾರೆ.