ಉಳ್ಳಾಲ (ಮಂಗಳೂರು): ಇಲ್ಲಿನ ಸೋಮೇಶ್ವರ ಸಮುದ್ರ ತೀರದಲ್ಲಿ ವಿಹಾರಕ್ಕೆ ಬಂದವರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಪ್ರಕರಣಲ್ಲೆ ಸಂಬಂಧಿಸಿ ಉಳ್ಳಾಲ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಉಳ್ಳಾಲ ಬಸ್ತಿಪಡ್ಪು ನಿವಾಸಿ ಯತೀಶ್, ಉಚ್ಚಿಲ ನಿವಾಸಿ ಸಚಿನ್, ಸುಹಾನ್ ಮತ್ತು ಓರ್ವ ಅಪ್ರಾಪ್ತ ಬಾಲಕ ಸೇರಿ ನಾಲ್ವರು ಪೊಲೀಸ್ ವಶದಲ್ಲಿದ್ದಾರೆ. ಇನ್ನುಳಿದವರ ಪತ್ತೆಯಾಗಿ ಪೊಲೀಸರು ತೀವ್ರ ಶೋಧಕಾರ್ಯದಲ್ಲಿ ತೊಡಗಿದ್ದಾರೆ.
ನೈತಿಕ ಪೊಲೀಸ್‌ಗಿರಿ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ಆರೋಪಿಗಳು ಸಂಘಟನೆಯೊಂದರ ಕಾರ್ಯಕರ್ತರು ಎಂದು ತಿಳಿದುಬಂದಿದೆ. ಸೋಮೇಶ್ವರ ಸಮುದ್ರ ತೀರದಲ್ಲಿ ಉಳ್ಳಾಲ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಏನಿದು ಘಟನೆ?: ಮಂಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶುಕ್ರವಾರ ಸಂಜೆ ಸೋಮೇಶ್ವರ ಸಮುದ್ರ ತೀರಕ್ಕೆ ವಾಯು ವಿಹಾರಕ್ಕೆಂದು ಆಗಮಿಸಿದ್ದರು. ಇವರಲ್ಲಿ ಮೂವರು ಯುವಕರು ಅನ್ಯ ಸಮುದಾಯಕ್ಕೆ ಸೇರಿದವರೆಂದು ತಂಡವೊಂದು ಅವರನ್ನು ಹಿಂಬಾಲಿಸಿತ್ತು. ಬಳಿಕ ಬೀಚ್ ಬಳಿ ವಿದ್ಯಾರ್ಥಿಗಳ ಹೆಸರು, ವಿಳಾಸ ಕೇಳಿದ್ದರು. ನಂತರು ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ನಡೆಸಿದ್ದರು. ಘಟನೆಯಲ್ಲಿ ಹಲ್ಲೆಗೊಳಗಾದ ಮೂವರು ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನು ಘಟನೆ ಬಳಿಕ ವಿದ್ಯಾರ್ಥಿನಿಯರು ಕೆರಳಕ್ಕೆ ತೆರಳಿದ್ದಾರೆ. ಹಲ್ಲೆ ಕುರಿತು ಗಾಯಗೊಂಡವರು ನೀಡಿದ ದೂರು ಮೇರೆಗೆ ಉಳ್ಳಾಲ ಪೊಲೀಸರು ತನಿಖೆ ಕೈಗೊಂಡಿದ್ದರು.
ಜೊತೆಗೆ ಪ್ರಕರಣ ಭೇದಿಸಲು ಮೂರು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಇದೀಗ ಪೊಲೀಸ್ ತಂಡವು ನಾಲ್ಕು ಜನರನ್ನು ವಶಕ್ಕೆ ಪಡೆದುಕೊಂಡಿದೆ. ಗುರುವಾರ ಸಂಜೆ 7:20ರ ಸುಮಾರಿಗೆ ಸೋಮೇಶ್ವರ ಸಮುದ್ರ ತೀರದಲ್ಲಿದ್ದ ನಡೆದ ಘಟನೆ ಕುರಿತು ಮಾಹಿತಿ ಸಿಕ್ಕ ತಕ್ಷಣ ಘಟನಾ ಸ್ಥಳಕ್ಕೆ 112 ಗಸ್ತು ವಾಹನ ತಲುಪಿತ್ತು. ಬಳಿಕ ಹಲ್ಲೆಗೊಳಗಾದ ಯುವಕರನ್ನು ಆಸ್ಪತ್ರೆಗೆ ದಾಖಲಿಸಿದೆ.
ವಿದ್ಯಾರ್ಥಿಗಳ ದೂರು ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ನಿನ್ನೆ ತಿಳಿಸಿದ್ದರು.