ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಉಮೇಶ್ ಪಾಲ್ ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ಮಾಜಿ ಸಂಸದ ಮತ್ತು ಪಾತಕಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅವರನ್ನು ತಪ್ಪಿತಸ್ಥರೆಂದು ಪ್ರಯಾಗರಾಜ್ ಜನಪ್ರತಿನಿಧಿಗಳ ಕೋರ್ಟ್ ಆದೇಶ ಹೊರಡಿಸಿದೆ.
ಉಮೇಶ್ ಪಾಲ್ ಅವರು ಬಿಎಸ್ ಪಿಯ ಮಾಜಿ ಶಾಸಕ ರಾಜು ಪಾಲ್ ಅವರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದರು. ಅತೀಕ್ ಅಹ್ಮದ್ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 17ರಂದು ಮುಂದೂಡಿತ್ತು.
ಮುಖ್ಯ ನ್ಯಾಯಮೂರ್ತಿ ಎದುರು ತುರ್ತು ವಿಚಾರಣೆಗೆ ಪ್ರಸ್ತಾಪಿಸಿದ ನಂತರ ವಿಷಯವನ್ನು ಪಟ್ಟಿ ಮಾಡಲಾಗಿತ್ತು. ವಕೀಲರು ಸಮಯ ಕೋರಿದ್ದಾರೆ. ಒಂದು ವಾರದ ನಂತರ ಪಟ್ಟಿ ಮಾಡಿ ಎಂದು ಪೀಠ ಹೇಳಿತ್ತು. ಪ್ರಸ್ತುತ ಗುಜರಾತ್’ನ ಅಹಮದಾಬಾದ್ ಕೇಂದ್ರ ಕಾರಾಗೃಹದಲ್ಲಿರುವ ಅಹ್ಮದ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ತನ್ನನ್ನು ನಾಶಪಡಿಸಲು ಮತ್ತು ತನ್ನ ಕುಟುಂಬ ಸದಸ್ಯರ ಜೀವಕ್ಕೆ ಬೆದರಿಕೆ ಇದೆ ಎಂದು ಹೇಳಿದ್ದರು.
ಪೊಲೀಸ್ ಕಸ್ಟಡಿ ಅಥವಾ ವಿಚಾರಣೆಯ ಸಮಯದಲ್ಲಿ ತನಗೆ ಯಾವುದೇ ರೀತಿಯಲ್ಲಿ ದೈಹಿಕ ಗಾಯ ಅಥವಾ ಹಾನಿಯಾಗದಂತೆ ನೋಡಿಕೊಳ್ಳಲು ನಿರ್ದೇಶನಗಳನ್ನು ಅತೀಕ್ ಕೋರಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಅತೀಕ್ ಅಹ್ಮದ್’ನ ಸಹಚರನ ಮನೆಯನ್ನು ಬಿಗಿ ಪೊಲೀಸ್ ಬಂದೋಬಸ್ತ್’ನಲ್ಲಿ ಬುಲ್ಡೋಜರ್ ಬಳಸಿ ನೆಲಸಮಗೊಳಿಸಲಾಗಿತ್ತು.