ಮನೆ ಅಪರಾಧ ಅನಧಿಕೃತ ಮೀಟರ್ ಬಡ್ಡಿ: ತಡರಾತ್ರಿ ಕಾರ್ಯಾಚರಣೆ- ದಂಧೆಕೋರರು ವಶಕ್ಕೆ

ಅನಧಿಕೃತ ಮೀಟರ್ ಬಡ್ಡಿ: ತಡರಾತ್ರಿ ಕಾರ್ಯಾಚರಣೆ- ದಂಧೆಕೋರರು ವಶಕ್ಕೆ

0

ಮುಂಡಗೋಡ: ಅನಧಿಕೃತ ಮೀಟರ್ ಬಡ್ಡಿ ವ್ಯವಹಾರದ ಕುರಿತು ವ್ಯಾಪಕ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ನೇತೃತ್ವದಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ವಿಶೇಷ ಪೊಲೀಸರ ತಂಡಗಳು ಆರೋಪಿತರ ಮನೆ ಮೇಲೆ ಸೋಮವಾರ ಮಧ್ಯರಾತ್ರಿಯಿಂದ ಕಾರ್ಯಾಚರಣೆ ನಡೆಸಿ, ಶಂಕಿತ ಕೆಲವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

Join Our Whatsapp Group

ಶಿರಸಿ ಗ್ರಾಮೀಣ, ನಗರ ಠಾಣೆ, ಯಲ್ಲಾಪುರ, ರಾಮನಗರ ಪೊಲೀಸ್ ತಂಡಗಳು, ಸಶಸ್ತ್ರ  ಮೀಸಲು ಪಡೆಯ ತುಕಡಿಯೊಂದಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ನಾಯ್ಕ, ಶಿರಸಿ ಡಿಎಸ್ಪಿ ಗಣೇಶ ಕೆ.ಎಲ್ ಖುದ್ದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಿತ ಹೊರ ತಾಲ್ಲೂಕಿನ ಅಧಿಕಾರಿ, ಸಿಬ್ಬಂದಿ ನಿರ್ದಿಷ್ಟ ಆರೋಪಿತರ ಮನೆಗಳ ಮೇಲೆ ದಾಳಿ ಮಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ಕಾರ್ಯಾಚರಣೆಯ ಸುಳಿವು ಅರಿತ ಕೆಲವು ಶಂಕಿತರು ಮೊದಲೇ ಪರಾರಿಯಾಗಿದ್ದರು ಎಂಬ ಆರೋಪ ಸಹ ಕೇಳಿಬರುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಟ್ಟಣದಲ್ಲಿ ಬೀಡುಬಿಟ್ಟಿದ್ದು, ವಿಚಾರಣೆ ತೀವ್ರಗೊಳಿಸಿದ್ದಾರೆ.