ಮನೆ ರಾಜ್ಯ ರಾಜ್ಯದಲ್ಲಿನ ಅನಧಿಕೃತ ಬಡಾವಣೆಗಳಿಗೆ ಬಿತ್ತು ಕಡಿವಾಣ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿನ ಅನಧಿಕೃತ ಬಡಾವಣೆಗಳಿಗೆ ಬಿತ್ತು ಕಡಿವಾಣ: ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಅನಧಿಕೃತ ಬಡಾವಣೆಗಳು ನಗರ, ಪಟ್ಟಣ, ಪಾಲಿಕೆ ವ್ಯಾಪ್ತಿ ಮತ್ತು ಹಳ್ಳಿಗಳಲ್ಲೂ ಇವೆ. ಇವೆಲ್ಲಕ್ಕೂ ಅಂತ್ಯ ಹಾಡಬೇಕು. ಅನಧಿಕೃತ ಬಡಾವಣೆಗಳಿಂದ ಕಂದಾಯ ಬರುತ್ತಿಲ್ಲ, ಪರಿಣಾಮ‌ ಜನರಿಗೆ ನಾಗರಿಕ ಸವಲತ್ತುಗಳೂ ಸಿಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಬರುವ ಆದಾಯವೂ ಬಂದ್ ಆಗಿದೆ. ಇವೆಲ್ಲ ಅನಾನುಕೂಲಗಳಿಗೂ ಅಂತ್ಯ ಹಾಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Join Our Whatsapp Group

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಮಹಾನಗರಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡುವ ಕುರಿತು ಜಿಲ್ಲಾಧಿಕಾರಿಗಳು, ಯೋಜನಾ ನಿರ್ದೇಶಕರು, ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳೊಂದಿಗೆ ಮಂಗಳವಾರ (ಫೆ.18) ವಿಡಿಯೊ ಸಂವಾದ ನಡೆಸಿದರು.

ಕಾಯ್ದೆ ಮೂಲಕ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡಬೇಕು. ಅಧಿಕಾರಿಗಳು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡಿ. ಕಂದಾಯ ಕಟ್ಟದಿರುವುದರಿಂದ ಇಷ್ಟೆಲ್ಲಾ ಸಮಸ್ಯೆಗಳಾಗಿವೆ. ಇದೊಂದು ಸಲ ಮಾತ್ರ ಬಿ ಖಾತಾ ಕೊಟ್ಟು, ನಂತರ ಅಂತ್ಯ ಹಾಡಬೇಕು. ನಿಮಗೆ (ಅಧಿಕಾರಿಗಳು) ಮೂರು ತಿಂಗಳು ಮಾತ್ರ ಸಮಯ ನೀಡುತ್ತೇನೆ, ಅಷ್ಟರೊಳಗೆ ಅಭಿಯಾನ ನಡೆಸಿ ಪೂರ್ಣಗೊಳಿಸಿ. ಯಾವುದೇ ರಾಜಿ ಇಲ್ಲ. ಅಧಿಕಾರಿಗಳು ರಾಜಿ ಮಾಡಿಕೊಂಡರೆ ಸಹಿಸಲ್ಲ ಎಂದರು.

ಅನಧಿಕೃತ ಬಡಾವಣೆಗಳು ಮತ್ತೆ ತಲೆ ಎತ್ತಿದರೇ ಜಿಲ್ಲಾಧಿಕಾರಿ, ಮುಖ್ಯ ಅಧಿಕಾರಿ, ನಗರ ಯೋಜನಾ ಅಧಿಕಾರಿಗಳು ಜವಾಬ್ದಾರಾಗುತ್ತಾರೆ. ಆಗ, ನಿಮ್ಮ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ. ಮಧ್ಯವರ್ತಿಗಳಿಗೆ, ಬ್ರೋಕರ್​ಗಳಿಗೆ ತಕ್ಷಣ ಗೇಟ್ ಪಾಸ್ ನೀಡಿ. ಇದನ್ನು ನೀವೆಲ್ಲರೂ ಸ್ಪಷ್ಟವಾಗಿ, ಖಚಿತವಾಗಿ ಅರ್ಥ ಮಾಡಿಕೊಳ್ಳಿ. ರಾಜ್ಯದಲ್ಲಿ ಇನ್ನೆಲ್ಲೂ ಅನಧಿಕೃತ ಬಡಾವಣೆಗಳು, ರೆವಿನ್ಯೂ ಬಡಾವಣೆಗಳು ತಲೆ ಎತ್ತಬಾರದು ಎಂದು ಎಚ್ಚರಿಕೆ ನೀಡಿದರು.

ಅನಧಿಕೃತ, ರೆವಿನ್ಯೂ ಬಡಾವಣೆಗಳಲ್ಲಿ ನಿವೇಶನ, ಮನೆ ಕಟ್ಟಿರುವವರಿಗೆ ತೊಂದರೆ ಆಗಬಾರದು. ಒಟ್ಟಾರೆಯಾಗಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಒಂದು ಬಾರಿ ಪರಿಹಾರ ಕೊಟ್ಟಿದ್ದೀವೆ. ಮೂರು ತಿಂಗಳಲ್ಲಿ ಎಲ್ಲರಿಗೂ ಖಾತಾ ನೀಡಿ ಅಂತ್ಯ ಹಾಡಿ. ನಾನು ಮತ್ತು ಸಂಬಂಧಪಟ್ಟ ಎಲ್ಲಾ ಸಚಿವರು ಸ್ಪಷ್ಟಪಡಿಸಿದ್ದೀವೆ. ಹೊಸ ಗೊಂದಲಗಳಿಗೆ ಅವಕಾಶ ಮಾಡಿಕೊಡಬೇಡಿ ಬಿ ಖಾತಾ ಇವತ್ತಿನಿಂದಲೇ ಕೊಡಲು ಶುರು ಮಾಡಿ ಎಂದು ಸೂಚನೆ ನೀಡಿದರು.

ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.