ಬೆಂಗಳೂರು: ಮಂಗಳವಾರ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿಯಾಗಿದೆ.
ಬೆಂಗಳೂರಿನ ಹೆಣ್ಣೂರು ಸಮೀಪದ ಬಾಬಾ ಸಾಬ್ ಪಾಳ್ಯದಲ್ಲಿ. 60-40 ಸೈಟ್ ಅಳತೆಯಲ್ಲಿ 6 ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಿಸಲಾಗ್ತಿತ್ತು. ನಿರ್ಮಾಣಹಂತದ ಕಟ್ಟಡದಲ್ಲಿ ಬಿಹಾರ ಮತ್ತು ಉತ್ತರ ಕರ್ನಾಟಕ ಮೂಲದ 21ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದ್ರೆ ಭಾರಿ ಮಳೆ ಹೊಡೆತಕ್ಕೆ, ಕಳಪೆ ಕಾಮಗಾರಿಯಿಂದ ಕೂಡಿದ್ದ ಕಟ್ಟಡ ನಿನ್ನೆ(ಅಕ್ಟೋಬರ್ 22) ಸಂಜೆ ಏಕಾಏಕಿ ದೊಪ್ಪೆಂದು ಕುಸಿದುಬಿದ್ದಿದೆ.
ಮೊಹಮ್ಮದ್ ಸಾಹಿಲ್, ತಿರುಪಾಲಿ, ಅರ್ಮಾನ್, ಶಂಕರ್, ಸತ್ಯರಾಜ್ ಮೃತಪಟ್ಟವರು. ರಾತ್ರಿ ಇಡೀ ಅವಶೇಷಗಳಡಿ ಸಿಲುಕಿದವರ ಪತ್ತೆಕಾರ್ಯ ನಡೆದಿದೆ.
ಕಾಮಗಾರಿಯ ವೇಳೆಗೆ 21 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಈಗಾಗಲೇ ಅಗ್ನಿಶಾಮಕ, ಎನ್ಡಿಆರ್ಎಫ್, ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ 13 ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಈ ಪೈಕಿ 6 ಮಂದಿ ಕಾರ್ಮಿಕರಿಗೆ ತೀವ್ರ ಗಾಯಗಳಾಗಿದ್ದು, ಓರ್ವ ಕಾರ್ಮಿಕನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಹಲವು ಅವೇಶಷಗಳಡಿಯಲ್ಲಿ ಸಿಲುಕಿರುವ ಶಂಕೆ ಇದ್ದು, ಒಂದು ಹ್ಯಾಮರ್, ಮೂರು ಜೆಸಿಬಿಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಮಾಲೀಕನ ವಿರುದ್ಧ ಎಫ್ಐಆರ್
ಮಲ್ಲೇಶ್ವರಂನಲ್ಲಿ ವಾಸವಿದ್ದ ಆಂಧ್ರ ಮೂಲದ ಮುನಿರಾಜು ರೆಡ್ಡಿ ಎಂಬುವರಿಗೆ ಸೇರಿದ ಕಟ್ಟಡ ಇದಾಗಿದೆ. 6 ಅಂತಸ್ತಿನ ಅಪಾರ್ಟ್ ಮೆಂಟ್ ನಿರ್ಮಾಣ ಕಾರ್ಯ 8 ತಿಂಗಳಿಂದ ನಡೆಯುತ್ತಿದೆ. ಆದ್ರೆ, ಇದೀಗ ಏಕಾಏಕಿ ಕುಸಿದುಬಿದ್ದಿದೆ. ಈ ಘಟನೆ ಸಂಭವಿಸುತ್ತಿದ್ದಂತೆಯೇ ಕಟ್ಟಡ ಮಾಲೀಕ ಮುನಿರಾಜು ರೆಡ್ಡಿ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುಮತಿ ಪಡೆದಿರುವ ಬಗ್ಗೆ ಮಾಹಿತಿ ಇದೆ. ಆದ್ರೆ, ನೆಲಮಹಡಿ ಪಾರ್ಕಿಂಗ್ ಬಿಟ್ಟು 7 ಅಂತಸ್ತಿನ ಕಟ್ಟಡ ನಿರ್ಮಾಣ ಆರೋಪ ಕೇಳಿಬಂದಿದೆ. ಸದ್ಯ ಮುನಿರಾಜು ರೆಡ್ಡಿ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.