ಬೆಂಗಳೂರು(Bengaluru): ಮದ್ಯದ ಅಮಲಿನಲ್ಲಿ ಅನುಮಾನಾಸ್ಪದವಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ ಕೆಜಿಗಟ್ಟಲೇ ಚಿನ್ನಾಭರಣ ಮತ್ತು ನಗದು ಪತ್ತೆಯಾಗಿದೆ.
ವಿನೋದ್ ಕುಮಾರ್ ಬಂಧಿತ ಆರೋಪಿ. ಈತನಿಂದ 90 ಲಕ್ಷ ರೂ. ಮೌಲ್ಯದ 1 ಕೆ.ಜಿ. 800 ಗ್ರಾಂ ಚಿನ್ನಾಭರಣ, 22 ಲಕ್ಷ ರೂ. ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನ.26ರ ರಾತ್ರಿ ಎಸ್.ಜೆ.ಪಾರ್ಕ್ ವ್ಯಾಪ್ತಿಯ ಎಸ್.ಪಿ. ರಸ್ತೆಯಲ್ಲಿ ವಿನೋದ್ ಕುಮಾರ್ ಎರಡು ಬ್ಯಾಗ್ ಹಿಡಿದು ಕೊಂಡು ನಡೆದುಕೊಂಡು ಹೋಗುತ್ತಿದ್ದ. ಅದೇ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಆತನ ವರ್ತನೆ ಹಾಗೂ ಬ್ಯಾಗ್ ಕಂಡು ಅನುಮಾನಗೊಂಡಿದ್ದಾರೆ.
ಆರೋಪಿಯನ್ನು ಹಿಡಿದು ತಪಾಸಣೆ ನಡಸಿದಾಗ ಚಿನ್ನಾಭರಣ, ನಗದು ಪತ್ತೆಯಾಗಿದೆ. ಅದನ್ನು ಕಂಡ ಪೊಲೀಸರು ಒಂದು ಕ್ಷಣ ದಂಗಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿದಾಗ ಯಾವುದೇ ಮಾಹಿತಿ ನೀಡಿಲ್ಲ.
ಅಲ್ಲದೆ, ಪೊಲೀಸರಿಂದ ತಪ್ಪಿಸಿಕೊಂಡು ಸುಮಾರು ದೂರ ಓಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಚೆನ್ನೈ ಮೂಲದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಸೇರಿದ್ದು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಇದುವರೆಗೂ ಯಾವುದೇ ವ್ಯಕ್ತಿ ಚಿನ್ನಾಭರಣ ಕಳ್ಳತನದ ಬಗ್ಗೆ ದೂರು ನೀಡಿಲ್ಲ. ಹೀಗಾಗಿ ಇದೊಂದು ಹವಾಲಾ ಮೂಲಕ ವರ್ಗಾವಣೆ ಆಗುತ್ತಿದ್ದ ಹಣ, ಚಿನ್ನಾಭರಣ ಎಂದು ಹೇಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್.ಜೆ.ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.