ಮನೆ ಅಂತಾರಾಷ್ಟ್ರೀಯ ಸೋಮನಾಥಪುರಕ್ಕೆ ಯುನೆಸ್ಕೋ ತಜ್ಞರ ತಂಡ ಭೇಟಿ: ಪರಿಶೀಲನೆ

ಸೋಮನಾಥಪುರಕ್ಕೆ ಯುನೆಸ್ಕೋ ತಜ್ಞರ ತಂಡ ಭೇಟಿ: ಪರಿಶೀಲನೆ

0

ಮೈಸೂರು(Mysuru): ಸೋಮನಾಥಪುರ ಕೇಶವ ದೇವಾಲಯವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಹಿನ್ನೆಲೆಯಲ್ಲಿ ಟಿಯಾಂಗ್ ಕಿಯಾನ್ ಬೂನ್ ಅವರ ನೇತೃತ್ವದ ಯುನೆಸ್ಕೋ ತಜ್ಞರ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಹಾಗೂ ಭಾರತೀಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ರಾಜ್ಯ ಪ್ರಾಚ್ಯವಸ್ತು ಅಧಿಕಾರಿಗಳು ದೇವಾಲಯದ ಶಿಲ್ಪಕಲೆ, ಐತಿಹ್ಯ ಹಾಗೂ ಹೊಯ್ಸಳರ ಕಾಲದ ಕೆತ್ತನೆಗಳ ಬಗ್ಗೆ ಯುನೆಸ್ಕೋ ತಜ್ಞರ ತಂಡಕ್ಕೆ ಸಮಗ್ರ ವಿವರಣೆ ನೀಡಿದ್ದಾರೆ.

ದೇವಾಲಯದಲ್ಲಿನ ವಾಸ್ತುಶಿಲ್ಪ ಕಲೆ, ನಾಜೂಕಿನ ಕುಸುರಿ ಕಲೆ ಬಗ್ಗೆ ಟಿಯಾಂಗ್ ಕಿಯಾನ್ ಬೂನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಪದ ಕಲ್ಲಿನಲ್ಲಿ ಮೂಡಿರುವ ಅತ್ಯಂತ ಸೂಕ್ಷ್ಮ ಕೆತ್ತನೆಯ ಕಲಾ ನೈಪುಣ್ಯತೆ, ಮದನಿಕೆಯರ ಶಿಲ್ಪಗಳು, ನಾಟ್ಯ ಭಂಗಿ, ಮದನಿಕಾ ವಿಗ್ರಹಗಳು (ಆಕರ್ಷಕವಾದ ಸೊಗಸಾದ ನಾಟ್ಯ ಭಂಗಿಗಳು) ಶಿಲ್ಪ ಕಲೆ, ನಾಜೂಕಿನ, ಕುಸುರಿ ಕೆತ್ತನೆಗಳನ್ನು ತಂಡವು ಅತ್ಯಂತ ಆಸಕ್ತಿಯಿಂದ ಗಮನಿಸಿತು.

ನಂತರ ಸ್ಥಳೀಯರೊಂದಿಗೆ ಸಭೆ ನಡೆಸಿ ಸಾರ್ವಜನಿಕ ಅಭಿಪ್ರಾಯ ಪಡೆದ ಬೂನ್, ದೇವಾಲಯವು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವುದರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಜನರೊಂದಿಗೆ ಸಂವಾದ ನಡೆಸಿ, ಶಿಫಾರಸು ಮಾಡಲಾಗುವುದು. ಈ ಸಂಬಂಧ ಉನ್ನತಮಟ್ಟದ ಸಮಿತಿಯು ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

ಇನ್ಫೋಸಿಸ್ ಫೌಂಡೇಶನ್’ನ ಸುಧಾಮೂರ್ತಿ ಮಾತನಾಡಿ, ಈ ದೇವಾಲಯ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾದಲ್ಲಿ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗುತ್ತದೆ. ವಿವಿಧ ದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುವರು. ಆದ್ದರಿಂದ ಜನರ ವ್ಯಾಪಾರ ವಹಿವಾಟಿಗೆ ಸಹಕಾರಿಯಾಗುವುದಲ್ಲದೆ ಸ್ಥಳೀಯರು ಆರ್ಥಿಕ ಸಬಲತೆ ಹೊಂದಬಹುದು ಎಂದರು.

ರಾಜ್ಯ ಪುರಾತತ್ವ ಇಲಾಖೆ ಆಯುಕ್ತರಾದ ದೇವರಾಜ್, ಪುರಾತತ್ವ ಇಲಾಖೆಯ ಜಾಹನ್ವಿಜ್ ಶರ್ಮ, ಮದನ್ ಸಿಂಗ್ ಚೌಹಾಣ್, ಮಹೇಶ್ವರಿ, ಬಿಪಿನ್ ಚಂದ್ರ, ಜಿಲ್ಲಾಧಿಕಾರಿ ಬಗಾದಿ ಗೌತಮ್, ಪುರಾತತ್ವ ಇಲಾಖೆಯ ಜಿಲ್ಲಾ ಅಧಿಕಾರಿ ದೇವರಾಜ್, ಜಂಟಿ ನಿರ್ದೇಶಕಿ ಮಂಜುಳಾ, ತಹಶಿಲ್ದಾರ್ ಸಿ.ಜಿ. ಗೀತಾ ಇತರರು ಇದ್ದರು.