ಮನೆ ರಾಜ್ಯ ರೈತರ ಬೇಡಿಕೆ ಈಡೇರಿಸದ ಕೇಂದ್ರ ಬಜೆಟ್ ನಿರಾಶಾದಾಯಕ: ಈಶ್ವರ ಖಂಡ್ರೆ

ರೈತರ ಬೇಡಿಕೆ ಈಡೇರಿಸದ ಕೇಂದ್ರ ಬಜೆಟ್ ನಿರಾಶಾದಾಯಕ: ಈಶ್ವರ ಖಂಡ್ರೆ

0

ಬೆಂಗಳೂರು, ಫೆ1: ಕೇಂದ್ರ ಬಜೆಟ್ ರೈತರ ಬೇಡಿಕೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನಿರಾಶಾದಾಯಕವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

Join Our Whatsapp Group

ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ರೈತರು ಬೆಳೆದ ಬೆಳೆಗೆ ನಿಶ್ಚಿತ ಬೆಲೆ ಬರಬೇಕು. ಇಂದು ಅನ್ನದಾತರ ಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ. ಎಲ್ಲ ವಸ್ತುಗಳಿಗೂ ಎಂ.ಎಸ್.ಪಿ. ಇರುವಾಗ ರೈತರ ಕಷ್ಟಾರ್ಜಿತಕ್ಕೆ ನಿರ್ದಿಷ್ಟ ಬೆಲೆ ನೀಡುವ ಎಂ.ಎಸ್.ಪಿ. ಕಾಯಿದೆ ಬಗ್ಗೆ ಪ್ರಕಟಿಸದ ಬಜೆಟ್ ಇದಾಗಿದೆ ಎಂದು ತಿಳಿಸಿದ್ದಾರೆ.

ರೈತರು ಪ್ರಕೃತಿ ವಿಕೋಪದಿಂದ ತತ್ತರಿಸಿದ್ದು, ಸಾಲದ ಹೊರೆ ತಾಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಕೃಷಿ ಸಾಲ ಮನ್ನಾ ಬಗ್ಗೆ ಈ ಬಜೆಟ್ ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ ಎಂದೂ ತಿಳಿಸಿದ್ದಾರೆ.

ಬಜೆಟ್ ನಲ್ಲಿ ಬಿಜೆಪಿ ಮತ್ತು ಎನ್.ಡಿ.ಎ.ಯೇತರ ರಾಜ್ಯಗಳಿಗೆ ಘೋರ ಅನ್ಯಾಯ ಮಾಡಲಾಗಿದೆ. ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ಇಂತಹ ತಾರತಮ್ಯ ಸರ್ವತ ಸಮರ್ಥನೀಯವಲ್ಲ. ಇಂತಹ ಒಂದು ಕೆಟ್ಟ ಸಂಪ್ರದಾಯಕ್ಕೆ ಬಜೆಟ್ ನಾಂದಿ ಹಾಡಿದೆ. ಕರ್ನಾಟಕದ ನಿರೀಕ್ಷೆಗಳೂ ಹುಸಿಯಾಗಿವೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಎನ್.ಡಿ.ಎ. ಆಡಳಿತ 11 ವರ್ಷಗಳ ಕಾರ್ಯಕಾಲದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ನಿರುದ್ಯೋಗ ಸಮಸ್ಯೆ ಉಲ್ಬಣಿಸಿದೆ. ಈ ಬಜೆಟ್ ನಲ್ಲಿ ಕೂಡ ದುಡಿಯುವ ಯುವಕರ ಕೈಗೆ ಉದ್ಯೋಗ ನೀಡುವ ಯೋಜನೆ ರೂಪಿಸದಿರುವುದು ದುರ್ದೈವ ಎಂದು ತಿಳಿಸಿದ್ದಾರೆ.