ಮನೆ ದೇಶ 151 ಪೊಲೀಸ್ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವರ ಪದಕ

151 ಪೊಲೀಸ್ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವರ ಪದಕ

0


ನವದೆಹಲಿ (New Delhi): ದೇಶದ ವಿವಿಧ ರಾಜ್ಯಗಳ 151 ಪೊಲೀಸ್ ಸಿಬ್ಬಂದಿಗೆ  ಕೇಂದ್ರ ಗೃಹ ಸಚಿವರ ಪದಕ ಘೋಷಣೆ ಮಾಡಲಾಗಿದೆ. 2022 ರಲ್ಲಿ ಅತ್ಯುತ್ತಮ ತನಿಖೆ ನಿರ್ವಹಿಸಿದವರನ್ನು ಗುರುತಿಸಿ ಪದಕ ನೀಡಲಾಗುತ್ತಿದೆ.

ಪ್ರಶಸ್ತಿ ಪಡೆದವರಲ್ಲಿ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) 15, ಮಹಾರಾಷ್ಟ್ರ ಪೊಲೀಸ್ ಇಲಾಖೆಯ 11, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ತಲಾ 10, ಕೇರಳ ಪೊಲೀಸ್, ರಾಜಸ್ಥಾನ ಪೊಲೀಸ್ ಮತ್ತು ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯ ತಲಾ ಎಂಟು ಅಧಿಕಾರಿಗಳು ಪದಕ ಪುರಸ್ಕೃತರಾಗಿದ್ದಾರೆ. ಅಂತೆಯೇ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಪೊಲೀಸರು ಕೂಡ ಪ್ರಶಸ್ತಿಗೆ ಭಾಜನರಾಗಿದ್ದು, ಇದಲ್ಲದೆ ಪ್ರಶಸ್ತಿ ಪುರಸ್ಕೃತರಲ್ಲಿ 28 ಮಹಿಳಾ ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ ಎಂದು ತಿಳಿದುಬಂದಿದೆ.

2021ರ ತನಿಖೆಯಲ್ಲಿನ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕವನ್ನು 152 ಪೊಲೀಸ್ ಸಿಬ್ಬಂದಿಗೆ ನೀಡಲಾಗಿದೆ. 2021 ರಲ್ಲಿ ಈ ಪ್ರಶಸ್ತಿಗಳನ್ನು ಪಡೆದ ಸಿಬ್ಬಂದಿಗಳಲ್ಲಿ ಸಿಬಿಐನಿಂದ 15, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಪೊಲೀಸರಿಂದ ತಲಾ 11, ಉತ್ತರ ಪ್ರದೇಶದ 10, ಕೇರಳ ಮತ್ತು ರಾಜಸ್ಥಾನ ಪೊಲೀಸರಿಂದ 9, ತಮಿಳುನಾಡು ಪೊಲೀಸರಿಂದ 8, ಬಿಹಾರದಿಂದ ಏಳು, ಗುಜರಾತ್‌ನಿಂದ ತಲಾ ಆರು ಮಂದಿ ಸೇರಿದ್ದರು. ಅಂತೆಯೇ ಕರ್ನಾಟಕ ಮತ್ತು ದೆಹಲಿ ಪೊಲೀಸರು ಮತ್ತು ಉಳಿದವರು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ ಎನ್ನಲಾಗಿದೆ.

ಅಪರಾಧದ ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಮತ್ತು ತನಿಖೆಯಲ್ಲಿ ಅಂತಹ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ 2018ರಲ್ಲಿ ಈ ಪದಕ ನೀಡಿಕೆ ಆರಂಭಿಸಲಾಗಿತ್ತು. ಇದನ್ನು ಪ್ರತಿ ವರ್ಷ ಆಗಸ್ಟ್ 12 ರಂದು ಘೋಷಿಸಲಾಗುತ್ತದೆ.

ತನಿಖೆಯಲ್ಲಿನ ಅತ್ಯುತ್ತಮ ಸೇವೆಯನ್ನು ಗುರುತಿಸಿ ಕೇಂದ್ರ ತನಿಖಾ ಸಂಸ್ಥೆಗಳು, ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಯ ಸದಸ್ಯರಿಗೆ ತನಿಖೆಯಲ್ಲಿ ಶ್ರೇಷ್ಠತೆಯ ಆಧಾರದ ಮೇಲೆ ಪದಕವನ್ನು ನೀಡಲಾಗುತ್ತದೆ. ಹೆಡ್ ಕಾನ್‌ಸ್ಟೆಬಲ್‌ನಿಂದ ಹಿಡಿದು ಪೊಲೀಸ್ ಅಧೀಕ್ಷಕರವರೆಗೆ ಶ್ರೇಣಿಯ ಅರ್ಹ ಅಧಿಕಾರಿಗಳ ಶಿಫಾರಸುಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಕೇಳಲಾಗಿದೆ.