ನಾಗನಾರ್ (ಛತ್ತೀಸಗಢ): ಇಲ್ಲಿನ ರಾಷ್ಟ್ರೀಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿನ ಉಕ್ಕು ಉತ್ಪಾದನೆ ಪ್ರಮಾಣವನ್ನು ವಾರ್ಷಿಕ ಒಂದು ದಶಲಕ್ಷ ಟನ್’ನಿಂದ 2.8 ದಶಲಕ್ಷ ಟನ್’ಗೆ ಹೆಚ್ಚಿಸಬೇಕು ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಟಾಸ್ಕ್ ನಿಗದಿಪಡಿಸಿದ್ದಾರೆ.
ಛತ್ತೀಸಗಢ ಬಸ್ತರ್ ಜಿಲ್ಲೆಯ ನಾಗನಾರ್ ನಲ್ಲಿರುವ ರಾಷ್ಟ್ರೀಯ ಖನಿಜ ನಿಗಮ (NMDC Iron And Steel Plant) ದ ಅಧೀನದ ರಾಷ್ಟ್ರೀಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಸೋಮವಾರ ಭೇಟಿ ನೀಡಿದ ಸಚಿವರು; ಸಾವಿರಾರು ಎಕರೆ ಪ್ರದೇಶದಲ್ಲಿರುವ ಕಾರ್ಖಾನೆಯನ್ನು ವಿಸ್ತೃತವಾಗಿ ಪರಿಶೀಲನೆ ನಡೆಸಿದರು.
ಕಾರ್ಖಾನೆ ವೀಕ್ಷಣೆ ನಂತರ ಅಧಿಕಾರಿಗಳ ಸಭೆ ನಡೆಸಿದ ಸಚಿವರು; ಪ್ರಧಾನಿಗಳಾದ ನರೇಂದ್ರ ಮೋದಿ ಅವರು ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ ನಿಗದಿಪಡಿಸಿದ್ದು, ಆ ನಿಟ್ಟಿನಲ್ಲಿ ರಾಷ್ಟ್ರೀಯ ಖನಿಜ ನಿಗಮ (NMDC) ನಿರ್ಣಾಯಕ ಪಾತ್ರ ವಹಿಸಬೇಕು. ಆ ನಿಟ್ಟಿನಲ್ಲಿ ತನ್ನ ವ್ಯಾಪ್ತಿಯಲ್ಲಿನ ಉಕ್ಕು ಉತ್ಪಾದನಾ ಘಟಕಗಳಲ್ಲಿನ ಉತ್ಪಾದನಾ ಪ್ರಮಾಣ ಹೆಚ್ಚಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಕ್ಷಮತೆ, ದಕ್ಷತೆ ವಿಷಯದಲ್ಲಿ ರಾಜಿ ಇರಲೇಬಾರದು. ನುರಿತ ಮಾನವ ಸಂಪನ್ಮೂಲ ಬಳಸಿಕೊಂಡು, ಸವಾಲುಗಳನ್ನು ಅತ್ಯಾಧುನಿಕ ತಾಂತ್ರಿಕ ನೆರವಿನೊಂದಿಗೆ ಮೆಟ್ಟಿ ನಿಂತು ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ದೇಶದ ನಿರ್ಮಾಣದ ವಿಷಯದಲ್ಲಿ ಉಕ್ಕು ಕ್ಷೇತ್ರದ ಪಾತ್ರ ನಿರ್ಣಾಯಕ. ಈ ವಿಷಯದಲ್ಲಿ ಯಾರೂ ಹಿಂದೆಜ್ಜೆ ಇಡಬಾರದು ಎಂದು ಅವರು ಹೇಳಿದರು.
ಆತ್ಮನಿರ್ಭರ್ ಭಾರತ್, ಮೇಕ್ ಇನ್ ಇಂಡಿಯಾ ಪರಿಕಲ್ಪನೆಗಳ ಮೂಲಕ ಉಕ್ಕು ಕ್ಷೇತ್ರದಲ್ಲಿ ನಾವು ಸ್ವಾವಲಂಬನೆ ಸಾಧಿಸಿದರೆ ಪ್ರಧಾನಿಗಳ ವಿಕಸಿತ ಭಾರತ 2047ರ ಗುರಿಗೆ ಬಹುದೊಡ್ಡ ಕೊಡುಗೆ ನೀಡಬಹುದು. ದೇಶೀಯ ಉಕ್ಕು ಉತ್ಪಾದನೆಗೆ ಹೆಚ್ಚು ಒತ್ತು ಕೊಟ್ಟರೆ ನಾವು ಆ ಗುರಿಯನ್ನು ಸುಲಭವಾಗಿ ಮುಟ್ಟಬಹುದು ಎಂದರು ಸಚಿವರು.
ಉತ್ಪಾದನೆಯನ್ನು ಆರಂಭಿಸಿದ ಕೇವಲ ಒಂದೇ ವರ್ಷದಲ್ಲಿ ಒಂದು ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡಿದ ಕಾರ್ಖಾನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು; ದೇಶದ ಅತ್ಯುತ್ತಮ ಮೂಲಸೌಕರ್ಯ ಹೊಂದಿರುವ, ಅತ್ಯಾಧುನಿಕವಾದ ಈ ಕಾರ್ಖಾನೆಯಲ್ಲಿ ವಾರ್ಷಿಕ 2.8 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವುದು ಕಷ್ಟಸಾಧ್ಯವಿಲ್ಲ ಎಂದು ಸಚಿವರು ಪ್ರತಿಪಾದಿಸಿದರು.
ವರ್ಷದಿಂದ ವರ್ಷಕ್ಕೆ ಕಾರ್ಖಾನೆಯ ಉತ್ಪಾದನೆ, ವಹಿವಾಟು ಏರುಗತಿಯಲ್ಲಿರಬೇಕು ಎಂದು ಒತ್ತಿ ಹೇಳಿದ ಸಚಿವರು; ಗ್ರೀನ್ ಸ್ಟೀಲ್ ಹಾಗೂ ಸ್ಪೆಶಾಲಿಟಿ ಸ್ಟೀಲ್ ಉತ್ಪಾದನೆಯ ಬಗ್ಗೆ ಅಧಿಕಾರಿಗಳಿಗೆ ಮಹತ್ವಪೂರ್ಣ ಸೂಚನೆಗಳನ್ನು ಕೊಟ್ಟರು. ಅಲ್ಲದೆ, ಹೊಸ ಆವಿಷ್ಕಾರ, ತಂತ್ರಜ್ಞಾನದ ಬಗ್ಗೆ ಮುಕ್ತ ಮನಸ್ಸು ಹೊಂದಬೇಕು. ಕ್ಷಮತೆ, ದಕ್ಷತೆ ಹೆಚ್ಚಿಸುವ ಅಗತ್ಯ ಕ್ರಮ ವಹಿಸಿ. ಕೇಂದ್ರ ಸರಕಾರದಿಂದ ಎಲ್ಲಾ ಸಹಕಾರ ಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕಾರ್ಖಾನೆಗೆ ಭೇಟಿ, ಪರಿಶೀಲನೆ:
ಬೆಳಗ್ಗೆ ಬೆಂಗಳೂರಿನಿಂದ ಜಗದಲ್ ಪುರಕ್ಕೆ ಬಂದು ಅಲ್ಲಿಂದ ನಾಗನಾರ್ ನಲ್ಲಿರುವ ರಾಷ್ಟ್ರೀಯ ಉಕ್ಕು ಕಾರ್ಖಾನೆಗೆ ಆಗಮಿಸಿದ ಸಚಿವ ಕುಮಾರಸ್ವಾಮಿ ಅವರು; ಹಲವು ಗಂಟೆಗಳ ಕಾಲ ಕಾರ್ಖಾನೆಯನ್ನು ಪ್ರದಕ್ಷಿಣೆ ಹಾಕಿದರು.
ದೇಶದಲ್ಲಿಯೇ ಎರಡನೇ ಅತಿ ದೊಡ್ಡದಾದ ‘ಮಾ ದಂತೇಶ್ವರಿ’ ಬ್ಲಾಸ್ಟ್ ಫರ್ನೇಸ್ (ಊದು ಕುಲುಮೆ), ಉಕ್ಕು ಘನೀಕೃತ ಘಟಕ ಸೇರಿ ಎಲ್ಲಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಂತ್ರಿಕ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.
ಕಾರ್ಖಾನೆ ವೀಕ್ಷಣೆಯ ನಂತರ ಕಾರ್ಖಾನೆ ಚಟುವಟಿಕೆಗಳು, ಉಕ್ಕು ಉತ್ಪಾದನೆ, ವಿಲೇವಾರಿ, ಮಾರುಕಟ್ಟೆ ಇತ್ಯಾದಿ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದ ಸಚಿವ ಕುಮಾರಸ್ವಾಮಿ ಅವರು. ನೌಕರರ ಜತೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಸಚಿವರು ಕಾರ್ಖಾನೆಯ ಆವರಣದಲ್ಲಿರುವ ಶ್ರೀ ಬಾಮನ್ ದೇವಿ ಅಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಆಡಳಿತ ಕಚೇರಿ ಆವರಣದಲ್ಲಿ ಗಿಡ ನೆಟ್ಟು ನೀರೆರೆದರು.
ಎನ್’ಎಂಡಿಸಿ ಅಧ್ಯಕ್ಷ & ವ್ಯವಸ್ಥಾಪಕ ನಿರ್ದೇಶಕ ಅಮಿತವ್ ಮುಖರ್ಜಿ, ಮೆಕ್ರಾನ್ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕುಮಾರ್, ಬಸ್ತರ್ ಕ್ಷೇತ್ರದ ಸಂಸದ ಮಹೇಶ್ ಕಶ್ಯಪ್ ಸೇರಿದಂತೆ ಕಾರ್ಖಾನೆಯ ಹಿರಿಯ ಅಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.