ಮನೆ ರಾಜ್ಯ ಮೈಸೂರು ವಿಶ್ವವಿದ್ಯಾಲಯ: ಆನ್‌ಲೈನ್‌, ಆಫ್‌ಲೈನ್ ಕೋರ್ಸ್‌ಗಳ ಶುಲ್ಕ ಹೆಚ್ಚಳಕ್ಕೆ ತೀರ್ಮಾನ

ಮೈಸೂರು ವಿಶ್ವವಿದ್ಯಾಲಯ: ಆನ್‌ಲೈನ್‌, ಆಫ್‌ಲೈನ್ ಕೋರ್ಸ್‌ಗಳ ಶುಲ್ಕ ಹೆಚ್ಚಳಕ್ಕೆ ತೀರ್ಮಾನ

0

ಮೈಸೂರು(Mysuru): ಮೈಸೂರು ವಿಶ್ವವಿದ್ಯಾಲಯದಲ್ಲಿ ಆನ್‌ಲೈನ್‌ ಕೋರ್ಸ್‌ಗಳಿಗೆ ಸರಾಸರಿ ಶೇ. 30 ರಷ್ಟು ಹಾಗೂ ಆಫ್‌ಲೈನ್‌ ಕೋರ್ಸ್‌ಗಳಿಗೆ ಶೇ 5ರಷ್ಟು ಶುಲ್ಕ ಹೆಚ್ಚಿಸಿ ಶಿಕ್ಷಣ ಮಂಡಳಿಯ ಮೊದಲನೇ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕುಲಪತಿ ಪ್ರೊ.ಜಿ. ಹೇಮಂತ್‌ಕುಮಾರ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ  ಸಾಮಾನ್ಯ ಸಭೆಯಲ್ಲಿ ಶುಲ್ಕ ಪರಿಷ್ಕರಣೆ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಯಿತು.

2022–23ನೇ ಶೈಕ್ಷಣಿಕ ಸಾಲಿನಿಂದ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದಿಂದ ‘ಕ್ಲಿನಿಕಲ್‌ ರಿಪ್ರೊಡಕ್ಷನ್ ಜೆನಿಟಿಕ್ಸ್‌’ನಲ್ಲಿ 4 ಸೆಮಿಸ್ಟರ್‌ಗಳ ಎಂ.ಎಸ್ಸಿ. ಸ್ನಾತಕೋತ್ತರ ಪದವಿ ಕೋರ್ಸ್‌ ಪ್ರಾರಂಭಿಸಲು ಅನುಮತಿ ಕೊಡಲಾಯಿತು.

ಕೋರ್ಸ್‌ ಅನ್ನು ಮೈಸೂರಿನ ಮೆಡಿವೇವ್, ವಿಐಎಸ್ ಹಾಗೂ ಪರ್ಟಿಲಿಟಿ ರಿಸರ್ಚ್‌ ಆಸ್ಪತ್ರೆ ಸಹಯೋಗದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ. ದೇಶದ ವಿದ್ಯಾರ್ಥಿ ಮತ್ತು ಸಂಶೋಧಕರ ಮಾನವ ವೈದ್ಯಕೀಯ ತಳಿವಿಜ್ಞಾನ ಹಾಗೂ ಸಾಮರ್ಥ್ಯ ವೃದ್ಧಿಗೆ ಕೋರ್ಸ್‌ ಪ್ರಸ್ತುತವಾಗಿದೆ ಎಂದು ಮಂಡಿಸಲಾಯಿತು.

ಡಿಫೆನ್ಸ್‌ ಸ್ಟಡೀಸ್ ವಿಷಯದಲ್ಲಿ ಕೋರ್ಸ್‌ ಆರಂಭಕ್ಕೂ ಒಪ್ಪಿಗೆ ನೀಡಲಾಯಿತು. ಬಿಎ, ಎಂಎನಲ್ಲಿ ಕೋರ್ಸ್‌ ಆರಂಭಿಸಲಾಗುವುದು. ಈ ಹಿಂದೆ ಮಿಲಿಟರಿ ಸೈನ್ಸ್‌ ಎಂದಿತ್ತು. ಕೆಲವೇ ವರ್ಷಗಳಷ್ಟೆ ನಡೆದಿತ್ತು. ಈಗ ಬದಲಾಯಿಸಲಾಗಿದೆ. ದಕ್ಷಿಣ ಭಾರತದ ವಿಶ್ವವಿದ್ಯಾಲಯಗಳಲ್ಲಿ ಮೊದಲು ಎನಿಸಲಿದೆ ಎಂದು ಕುಲಪತಿ ಹೇಮಂತ್‌ಕುಮಾರ್‌ ತಿಳಿಸಿದರು.

ಪ್ರಭಾರ ಪ್ರಾಂಶುಪಾಲರಿಗೆ ಸೀಮಿತ ಅವಧಿ:

3 ವರ್ಷಕ್ಕೊಬ್ಬ ಪ್ರಾಂಶುಪಾಲರಿಗೆ ‘ಪ್ರಭಾರ’ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಿಗೆ ಪ್ರಭಾರದ ಮೇಲೆ ನೇಮಕವಾಗುವ ಪ್ರಾಂಶುಪಾಲರ ಅವಧಿಯನ್ನು ಒಟ್ಟಾರೆ ಗರಿಷ್ಠ 3 ವರ್ಷಗಳಿಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಲಾಯಿತು.  ನಂತರ, ಜೇಷ್ಠತಾ ಪಟ್ಟಿಯಲ್ಲಿ ಸೇವಾ ಹಿರಿತನ ಹೊಂದಿರುವ ಅರ್ಹ ಪ್ರಾಧ್ಯಾಪಕರನ್ನು ರೊಟೇಷನ್‌ ಆಧಾರದ ಮೇಲೆ ಪ್ರಭಾರ ಪ್ರಾಂಶುಪಾಲರನ್ನಾಗಿ ನೇಮಿಸಲು ಅನುಮೋದನೆ ನೀಡಲಾಯಿತು.

ಯೂನಿವರ್ಸಿಟಿ ಸ್ಕೂಲ್ ಆಫ್ ಎಂಜಿನಿಯರಿಂಗ್‌ ಡೀನ್ ಆಗಿ 2 ವರ್ಷಗಳ ಅವಧಿಗೆ ಯೂನಿವರ್ಸಿಟಿ ಸ್ಕೂಲ್‌ ಆಫ್‌ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ನಿರ್ದೇಶಕ ಪ್ರೊ.ಬಿ. ಶಂಕರ ಅವರನ್ನು ನೇಮಿಸಲು ಅನುಮೋದನೆ ನೀಡಲಾಯಿತು.