ಮನೆ ಸ್ಥಳೀಯ ಚಾಮುಂಡಿಬೆಟ್ಟ ಲಾಡು ತಯಾರಿಕಾ ಸ್ಥಳದಲ್ಲಿ ಅಸ್ವಚ್ಛತೆ: ವೇದಿಕೆ ಅಧ್ಯಕ್ಷ ಬಿ.ಬಿ. ರಾಜಶೇಖರ್ ಖಡಕ್ ಎಚ್ಚರಿಕೆ

ಚಾಮುಂಡಿಬೆಟ್ಟ ಲಾಡು ತಯಾರಿಕಾ ಸ್ಥಳದಲ್ಲಿ ಅಸ್ವಚ್ಛತೆ: ವೇದಿಕೆ ಅಧ್ಯಕ್ಷ ಬಿ.ಬಿ. ರಾಜಶೇಖರ್ ಖಡಕ್ ಎಚ್ಚರಿಕೆ

0

ಮೈಸೂರು : ನಗರದ ಚಾಮುಂಡಿಬೆಟ್ಟದಲ್ಲಿ ಅದಿ ದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ದಿನನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದು, ಭಕ್ತರಿಗೆ ನೀಡುವ ಲಾಡು ಪ್ರಸಾದ ತಯಾರಿಸುವ ಸ್ಥಳದಲ್ಲಿ ಸಾಕಷ್ಟು ಅಸ್ವಚ್ಛತೆ ಉಂಟಾಗಿದೆ. ಕೂಡಲೇ ಪ್ರಸಾದ ತಯಾರಿಸುವ ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ.ಬಿ. ರಾಜಶೇಖರ ಒತ್ತಾಯಿಸಿದ್ದಾರೆ.

ಮಂಗಳವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ಅಲ್ಲಿ ಲಾಡು ತಯಾರಿಸುವ ಅಡುಗೆ ಮನೆಯನ್ನು ವೀಕ್ಷಿಸಿ ಅಲ್ಲಿನ ಅಸ್ವಚ್ಚತೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನಾಡ ದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ದಿನನಿತ್ಯ ೨೦ ಸಾವಿರಕ್ಕಿಂತ ಅಧಿಕ ಭಕ್ತರು ಬರುತ್ತಾರೆ. ಆಷಾಡ ಶುಕ್ರವಾರಗಳಲ್ಲಿ ಲಕ್ಷಗಟ್ಟಲೆ ಭಕ್ತರು ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಭಕ್ತರಿಗೆ ಪ್ರಸಾದದ ರೂಪದಲ್ಲಿ ಲಾಡು ವಿತರಣೆ ಮಾಡಲಾಗುತ್ತದೆ. ಆದರೇ, ಲಾಡು ತಯಾರಿಸುವ ಅಡುಗೆ ಮನೆ ಅತ್ಯಂತ ಕಿರಿದಾಗಿದೆ. ಇಂತಹ ಸ್ಥಳದಲ್ಲಿ ದಿನಕ್ಕೆ ೨೦ ಸಾವಿರಕ್ಕಿಂತಲೂ ಅಧಿಕ ಲಾಡು ತಯಾರಿಸಬೇಕಿದೆ. ಇಲ್ಲಿ ಸಂಪೂರ್ಣ ಅಸ್ವಚ್ಛತೆ ತಾಂಡವವಾಡುತ್ತಿದೆ. ಅಲ್ಲಲ್ಲಿ ಕಸ ಕಡ್ಡಿಗಳು, ಪಾತ್ರೆಗಳನ್ನು ತೊಳೆದ ಗಲೀಜು ನೀರು, ಅಲ್ಲೆ ಬಿದ್ದಿರುವ ಎಣ್ಣೆಯ ಡಬ್ಬಗಳು ನೆಲದ ಗಾರೆಯಲ್ಲಾ ಅಂಟಂಡು, ದಿನನಿತ್ಯ ನೆಲದ ಗಾರೆಯನ್ನು ಸ್ವಚ್ಛ ಮಾಡದ ಕಾರಣ ಇಲ್ಲಿ ಸಾಕಷ್ಟು ಗಲೀಜು ಇದೆ. ಲಾಡು ತಯಾರಿಕಾ ಸ್ಥಳದ ಪಕ್ಕದಲ್ಲೇ ಕಸದ ರಾಶಿ ಹಾಗೂ ಗಲೀಜು ನೀರು ಹರಿಯುತ್ತಿದೆ.

ಪ್ರಸಾದವನ್ನು ತಯಾರು ಮಾಡುವ ಮತ್ತು ಪೊಟ್ಟಣ ಕಟ್ಟುವ ಕಾರ್ಮಿಕರಿಗೂ ಯಾವುದೇ ಸೌಲಭ್ಯಗಳನ್ನು ನೀಡಲಾಗಿಲ್ಲ, ಕಟ್ಟಡ ಸೋರುತ್ತಿದ್ದು, ಮಣ್ಣು ಮತ್ತು ನೀರು ಜಿನುಗುತ್ತಿದೆ. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಗೆ ಮಾಹಿತಿ ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು. ಇಂತಹ ಪರಿಸರದಲ್ಲಿ ತಯಾರಿಸುವ ಲಾಡುಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕಾಡುತ್ತದೆ. ಅಲ್ಲದೇ ಅಡುಗೆ ಮನೆಯೂ ತುಂಬಾ ಚಿಕ್ಕದು, ಇದನ್ನು ದೊಡ್ಡ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು ಮತ್ತು ವೈಜ್ಞಾನಿಕವಾದ ಅಡುಗೆ ಮನೆಯನ್ನು ನಿರ್ಮಿಸಬೇಕೆಂದು ಆಗ್ರಹಿಸಿದರಲ್ಲದೇ, ಅತ್ಯಂತ ಶೀಘ್ರವಾಗಿ ಜಿಲ್ಲಾಡಳಿತ ಇಲ್ಲಿ ಶುಚಿತ್ವ ಕಾಪಾಡದಿದ್ದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾದ್ಯಕ್ಷ ಬಿ.ಬಿ.ರಾಜಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್, ಕರುನಾಡು ಲಾರಿ ಚಾಲಕರ ಪರಿಷತ್ ರಾಜ್ಯಾಧ್ಯಕ್ಷರಾದ ಮಹದೇವಸ್ವಾಮಿ, ಕನ್ನಡಾಂಬೆ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಸಂತೋಷ್ ಉಪಸ್ಥಿತರಿದ್ದರು.