ಮೈಸೂರು(Mysuru): ಸಾಂಸ್ಕೃತಿಕ ನಗರಿ ಮೈಸೂರಿನಿಂದ 8 ಕಿ.ಮೀ ದೂರದಲ್ಲಿರುವ ಲಲಿತಾದ್ರಿಪುರ ಗ್ರಾಮದಲ್ಲಿ ಇಂದಿಗೂ ಕೂಡ ಅಸ್ಪೃಶ್ಯತೆ ಜೀವಂತವಾಗಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ಈಗಲೂ ಬಸವೇಶ್ವರ ದೇವಸ್ಥಾನಕ್ಕೆ ಪ್ರವೇಶವಿಲ್ಲ. ಪ್ರತಿ ವರ್ಷ ನಡೆಯುವ ಬಸವೇಶ್ವರ ಜಾತ್ರೆಗೂ (ಓಕಳಿ ಹಬ್ಬ) ದೇವಸ್ಥಾನದೊಳಗೆ ಪ್ರವೇಶ ನೀಡುವುದಿಲ್ಲ. ಪಂಕ್ತಿ ಬೋಜನಕ್ಕೆ ಕೂಡ ಅವಕಾಶವಿಲ್ಲ. ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಇರುತ್ತದೆ. ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಲಿಂಗಾಯಿತರ ಹೋಟೆಲ್’ನಲ್ಲಿ ಈಗಲೂ ಕುಳಿತು ತಿನ್ನಲು ಅವಕಾಶ ನೀಡುವುದಿಲ್ಲ. ದಲಿತರಿಗೆ ಪ್ರತ್ಯೇಕವಾಗಿ ಹೇರ್ ಕಟ್ಟಿಂಗ್ ಶಾಪ್ ಗಳನ್ನು ಮಾಡಲಾಗಿದೆ. ಇದರಿಂದ ದಲಿತರು ಅವಮಾನಕ್ಕೆ ಈಡಾಗುವಂತಾಗಿದೆ.
ಗ್ರಾಮದಲ್ಲಿ ಪ.ಜಾತಿಯ 250ಕುಟುಂಬಗಳು, ಲಿಂಗಾಯಿತರ 750 ಕುಟುಂಬಗಳು ಹಾಗೂ ಒಕ್ಕಲಿಗರು ಸುಮಾರು 200 ಕುಟಂಬಗಳಿವೆ. ಮೇಲ್ವರ್ಗದವರೇ ಅಧಿಕ ಸಂಖ್ಯೆಯಲ್ಲಿರುವ ಕಾರಣ ದಲಿತರು ಪ್ರಶ್ನೆ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.
ಮುಂದಿನ ಮಾರ್ಚ್’ನಲ್ಲಿ ನಡೆಯುವ ಹಬ್ಬಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸಭೆ ನಡೆಸಿ ದಲಿತರಿಗೆ ಸಮಾನತೆ ಕೊಡಿಸಬೇಕು.
ಆದ್ದರಿಂದ ಸಂಬಂಧಪಟ್ಟ ಆಧಿಕಾರಿಗಳು ಕೂಡಲೇ ಗಮನಹರಿಸಿ ಅಸ್ಪೃಶ್ಯತೆ ಸಮಸ್ಯೆಯಿಂದ ಬಳಲುತ್ತಿರುವ ಗ್ರಾಮದ ದಲಿತರಿಗೆ ನ್ಯಾಯ ಕೊಡಿಸಬೇಕು. ಅಲ್ಲದೇ ಗ್ರಾಮದಲ್ಲಿರುವ ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶ ನೀಡಬೇಕು. ಪಂಕ್ತಿ ಬೋಜನಕ್ಕೆ ಅವಕಾಶ ನೀಡಬೇಕು. ಇಸ್ತ್ರಿ ಅಂಗಡಿ, ಹೇರ್ ಸಲೂನ್, ಹೋಟೆಲ್ ಗಳು ಪ್ರತ್ಯೇಕವಾಗಿದ್ದು, ಎಲ್ಲಾ ಸಮುದಾಯವದವರಿಗೂ ಮುಕ್ತ ಅವಕಾಶ ನೀಡಬೇಕು ಎಂದು ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸೇವಾ ಸಮಿತಿ ಜಿಲ್ಲಾಧ್ಯಕ್ಷರಾದ ಆರ್.ವಿನೋದ್, ಉಪಾಧ್ಯಕ್ಷರಾದ ಪ್ರದೀಪ್ ಕುಮಾರ್ ಹಾಗೂ ಸುಭಾಷ್ ಒತ್ತಾಯಿಸಿದ್ದಾರೆ.