ಬಲ್ಲಿಯಾ(ಉತ್ತರಪ್ರದೇಶ): ಅತಿಕ್ರಮಣ ಜಾಗದಲ್ಲಿ ನಿರ್ಮಾಣಗೊಂಡಿದ್ದ ಭಾರತೀಯ ಜನತಾ ಪಕ್ಷದ ಕಚೇರಿಯನ್ನು ನಗರ ಪಾಲಿಕೆ ಅಧಿಕಾರಿಗಳು ಬುಲ್ಡೋಜರ್ ಕಾರ್ಯಾಚರಣೆ ಮೂಲಕ ಧ್ವಂಸಗೊಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ಮಂಗಳವಾರ (ಡಿ.17) ನಡೆದಿದೆ.
ಬಲ್ಲಿಯಾ ನಗರ ಪಾಲಿಕೆ ಪರಿಷತ್, ಜಿಲ್ಲಾಡಳಿತ ಹಾಗೂ ಬೃಹತ್ ಪ್ರಮಾಣದ ಪೊಲೀಸ್ ಸಿಬಂದಿಗಳ ಭದ್ರತೆಯೊಂದಿಗೆ ಬಿಜೆಪಿ ಕಚೇರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ವರದಿ ವಿವರಿಸಿದೆ.
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಇಂದಿರಾ ಮಾರ್ಕೆಟ್ ಪ್ರದೇಶದ ಚಿಟ್ಟು ಪಾಂಡೆಯಲ್ಲಿ ನಿರ್ಮಿಸಿದ್ದ ಬಿಜೆಪಿ ಶಾಖಾ ಕಚೇರಿಯನ್ನು ಬುಲ್ಡೋಜರ್ ಬಳಸಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾನೂನು ಪ್ರಕಾರ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅತಿಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ತೆರವುಗೊಳಿಸುತ್ತಿದ್ದೇವೆ ಎಂದು ಸಬ್ ಡಿಜಿಜನಲ್ ಮ್ಯಾಜಿಸ್ಟ್ರೇಟ್ ರಾಜೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಆದರೆ ಬಿಜೆಪಿ ಕಚೇರಿ ಧ್ವಂಸಗೊಳಿಸಿರುವ ಘಟನೆ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ. ಕಳೆದ ನಾಲ್ಕು ದಶಕಗಳಿಂದ ಅದೇ ಸ್ಥಳದಲ್ಲಿ ಬಿಜೆಪಿ ಕಚೇರಿ ಕಾರ್ಯಾಚರಿಸುತ್ತಿದ್ದು, ಇದೀಗ ಬುಲ್ಡೋಜರ್ ಬಳಸಿ ತೆರವುಗೊಳಿಸಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಂದ್ರ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ