ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ನಟಿಸಿ ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ಯುಐ ಚಿತ್ರ ತೆರೆಕಾಣಲು ಸಿದ್ದವಾಗಿದ್ದು, ಈ ಪ್ರಯುಕ್ತ ಇಂದು ಯೂಟ್ಯೂಬ್‌ನಲ್ಲಿ ಚಿತ್ರದ ವಾರ್ನರ್ (ಟ್ರೇಲರ್) ಬಿಡುಗಡೆಯಾಗಿದೆ.
ಯುಐ ಚಿತ್ರದ ವಾರ್ನರ್ ಸದ್ಯ ಯುಟ್ಯೂಬ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ನಂಬರ್ 1 ಟ್ರೆಂಡಿಂಗ್ ಆಗಿದೆ.
ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ವಾರ್ನರ್‌ಗಳು ಬಿಡುಗಡೆಯಾಗಿವೆ. ವಾರ್ನರ್‌ಲ್ಲಿ ತೋರಿಸಿರುವಂತೆಯೇ ಇದೊಂದು ಸೋಶಿಯೊ–ಪೊಲಿಟಿಕಲ್ ಕಥಾ ಹಂದರವನ್ನು ಹೊಂದಿರುವ ಚಿತ್ರವಾಗಿದ್ದು ತೀವ್ರ ಕುತೂಹಲ ಮೂಡಿಸಿದೆ.
‘ಟೀಸರ್ ಅಥವಾ ಟ್ರೇಲರ್ ಅಲ್ಲ. ವಾರ್ನರ್ (ಎಚ್ಚರಿಕೆ ನೀಡುವವ)’ ಎಂದು ಈ ಮೊದಲೇ ಚಿತ್ರತಂಡ ಹೇಳಿತ್ತು. ಚಿತ್ರೋದ್ಯಮದಲ್ಲಿ ಇದೊಂದು ವಿಶಿಷ್ಟ ಪ್ರಯತ್ನವಾಗಿದೆ
‘ಯುಐ’ ಸಿನಿಮಾವನ್ನು ವೀನಸ್ ಎಂಟರ್‌ಟೈನ್‌ಮೆಂಟ್ ಮತ್ತು ಲಹರಿ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ನಟ ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಚಿತ್ರ ಇದಾಗಿದೆ. ನಟ ಸಾಧು ಕೋಕಿಲಾ ಅವರೂ ಪ್ರಮುಖ ಪಾತ್ರದಲ್ಲಿದ್ದಾರೆ. ಬಿ.ಅ ಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕಿದೆ.
ಚಿತ್ರವು ಡಿಸೆಂಬರ್ 20ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಸಿನಿಮಾದ ಅಂತಿಮ ಹಂತದ ಕೆಲಸಗಳು ಭರದಿಂದ ಸಾಗಿವೆ. ಉಪೇಂದ್ರ ಅವರ ಅಭಿಮಾನಿಗಳು ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.