ಮನೆ ಸುದ್ದಿ ಜಾಲ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಲಭ್ಯ ಉನ್ನತೀಕರಣ: ಎಸ್.ಟಿ. ಸೋಮಶೇಖರ್

25 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಲಭ್ಯ ಉನ್ನತೀಕರಣ: ಎಸ್.ಟಿ. ಸೋಮಶೇಖರ್

0

ಮೈಸೂರು(Mysuru): ಅಮೃತ ಆರೋಗ್ಯ ಯೋಜನೆಯಡಿ ಜಿಲ್ಲೆಯ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಲಭ್ಯವನ್ನು ತಲಾ ₹ 20 ಲಕ್ಷ ವೆಚ್ಚದಲ್ಲಿ ಉನ್ನತೀಕರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಜಿಲ್ಲಾಡಳಿತದಿಂದ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹೆಚ್ಚು ಒತ್ತಡವಿರುವ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ನಗರಗಳ ವ್ಯಾಪ್ತಿಯ ಹೆಚ್ಚು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಸಮಗ್ರ ಆರೋಗ್ಯ ಸೇವೆ ನೀಡಲು 2022-23ನೇ ಸಾಲಿನಲ್ಲಿ ಜಿಲ್ಲೆಗೆ 6 ನಮ್ಮ ಕ್ಲಿನಿಕ್‌’ಗಳು ಮಂಜೂರಾಗಿದ್ದು, 5 ಕಾರ್ಯಾರಂಭಿಸಿವೆ. ಇನ್ನೊಂದರ ಸ್ಥಾಪನೆ ಪ್ರಗತಿಯಲ್ಲಿದೆ. ಎಂದರು.

ಬೆಂಗಳೂರು–ಮೈಸೂರು ದಶಪಥ ನಿರ್ಮಾಣ ಕಾಮಗಾರಿ ಚುರುಕಾಗಿ ನಡೆದಿದೆ. ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು ನಗರಗಳ ಬೈಪಾಸ್ ಕಾಮಗಾರಿ ಮುಕ್ತಾಯಗೊಂಡಿದೆ. ಈ ಪಥ ಸಂಪೂರ್ಣ ಸಿದ್ಧಗೊಂಡರೆ ಬೆಂಗಳೂರಿನಿಂದ ಮೈಸೂರನ್ನು ಕೇವಲ 90 ನಿಮಿಷಗಳಲ್ಲಿ ತಲುಪಬಹುದಾಗಿದೆ ಎಂದು ಹೇಳಿದರು.

ಪೊಲೀಸ್ ತುಕಡಿಗಳು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳ ತಂಡದ ಪಥಸಂಚಲನ ಗಮನಸೆಳೆಯಿತು. ಉಸ್ತುವಾರಿ ಸಚಿವರು ತೆರೆದ ಜೀಪಿನಲ್ಲಿ ಪಥಸಂಚಲನ ವೀಕ್ಷಿಸಿ, ಗೌರವವಂದನೆ ಸ್ವೀಕರಿಸಿದರು.

ಪ್ರಧಾನ ದಳಪತಿ ಅಶ್ವರೋಹಿ ದಳದ ಎಸಿಪಿ ಕೆ.ಎನ್.ಸುರೇಶ್ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.

ಬಳಿಕ ವಿವಿಧ ಶಾಲೆಗಳ ನೂರಾರು ಮಕ್ಕಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.

ಸೇಂಟ್ ಥಾಮಸ್ ಶಾಲೆಯ 500 ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ವೀರ ಯೋಧರಿಗೆ ಭಾವ ನಮನ’ ನೃತ್ಯ ಗಮನ ಸೆಳೆಯಿತು.

ಬಹುಮಾನ ವಿತರಣೆ:

ಸಶಸ್ತ್ರ ಪಡೆ ವಿಭಾಗ- ಕೆಎಸ್‌ಆರ್‌ಪಿ ತಂಡ ರುದ್ರಮುನಿ (ಪ್ರಥಮ), ದೇವರಾಜ ಉಪ ವಿಭಾಗ ಪ್ರವೀಣ್‌ಕುಮಾರ್ (ದ್ವಿತೀಯ) ಹಾಗೂ ಕೆಎಸ್‌ಆರ್‌ಪಿ ಚೇತನ್ (ತೃತೀಯ). ಸಶಸ್ತ್ರರಹಿತ ವಿಭಾಗ- ಎನ್‌ಸಿಸಿ ವಾಯುಸೇನೆ ಟಿ.ವಿ. ಖುಷಿ (ಪ್ರಥಮ), ಎನ್‌ಸಿಸಿ ನೌಕದಳ ಕೆ.ಆರ್.ಅನಿರುದ್ಧ (ದ್ವಿತೀಯ) ಹಾಗೂ ಎನ್‌ಸಿಸಿ ಭೂಸೇನೆ ಲೇಖನ (ತೃತೀಯ). ಶಾಲಾ ವಿಭಾಗ- ಜವಾಹರ ನವೋದಯ ಬಾಲಕಿಯರ ತಂಡದ ಗೀತಾ (ಪ್ರಥಮ), ಭಾರತೀಯ ಸೇವಾ ದಳ ಬಾಲಕಿಯರ ತಂಡದ ಅಶ್ವಿನಿ(ದ್ವಿತೀಯ) ಹಾಗೂ ಅಮೃತ ವಿದ್ಯಾಲಯದ ಎಂ.ಪ್ರತೀಕ್ಷಾ (ತೃತೀಯ) ಬಹುಮಾನ ಗಳಿಸಿದರು.

ಡಿಎಆರ್, ಕೆಎಸ್‌’ಆರ್‌’ಪಿ ಮತ್ತು ಸಿಎಆರ್ ಪೊಲೀಸ್ ಬ್ಯಾಂಡ್‌ಗಳಿಗೆ ವಿಶೇಷ ಬಹುಮಾನ ನೀಡಲಾಯಿತು.