ಭಾರತದ ಆಧುನಿಕ ಹಣಕಾಸು ವ್ಯವಸ್ಥೆಯಲ್ಲಿ ಕ್ರಾಂತಿಕಾರಿಯಾಗಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಮತ್ತೊಂದು ದೊಡ್ಡ ಹೆಜ್ಜೆ ಇಡುತ್ತಿದೆ. ಜೂನ್ 16(ಇಂದಿನಿಂದ), 2025 ರಿಂದ ಯುಪಿಐ ಪಾವತಿಗಳ ಪ್ರಕ್ರಿಯೆ ಇನ್ನಷ್ಟು ವೇಗವಾಗಿ ಆಗಲಿದೆ. ಈ ಹೊಸ ವ್ಯವಸ್ಥೆಯಂತೆ, ಗ್ರಾಹಕರು ಹಣವನ್ನು ಕಳಿಸಿದ್ದರೆ ಅದು ಸವಿವರವಾಗಿ 15 ರಿಂದ 20 ಸೆಕೆಂಡುಗಳೊಳಗೆ ಸಮರ್ಪಕವಾಗಿ ಮುಕ್ತಾಯವಾಗಲಿದೆ.
ಈ ಮಹತ್ವದ ತಿದ್ದುಪಡಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ವತಿಯಿಂದ ರೂಪಗೊಂಡಿದ್ದು, ಇತ್ತೀಚೆಗೆ ಎಪ್ರಿಲ್ 26, 2025 ರಂದು ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಈ ತಿದ್ದುಪಡಿಯು ಯುಪಿಐ ವಹಿವಾಟಿನ ಪ್ರತಿಕ್ರಿಯೆ ಸಮಯವನ್ನು ಕಡಿಮೆ ಮಾಡಿ, ಬಳಕೆದಾರರಿಗೆ ಅತ್ಯಂತ ವೇಗದ ಮತ್ತು ನಿಖರವಾದ ಅನುಭವವನ್ನು ನೀಡಲು ಉದ್ದೇಶಿಸಲಾಗಿದೆ.
ಎನ್ಪಿಸಿಐ ಪ್ರಕಟಣೆಯ ಪ್ರಕಾರ, ಈ ಬದಲಾವಣೆಗಳ ನಂತರ, ಯುಪಿಐ ಪಾವತಿಗಳ ಪ್ರಕ್ರಿಯೆಗಳಲ್ಲಿ ಕಳುಹಿಸುವ ಬ್ಯಾಂಕುಗಳು, ಹಣ ಸ್ವೀಕರಿಸುವ ಬ್ಯಾಂಕುಗಳು, ಮತ್ತು ಫೋನ್ಪೇ, ಪೇಟಿಎಂ, ಗೂಗಲ್ ಪೇ ಮುಂತಾದ ಪಾವತಿ ಸೇವಾ ಪೂರೈಕೆದಾರರಿಗೆ ತಂತ್ರಾಂಶ ನವೀಕರಣದ ಅವಶ್ಯಕತೆ ಇದೆ. ಈ ಬದಲಾವಣೆಗಳ ಉದ್ದೇಶ ಗ್ರಾಹಕರ ಅನುಭವವನ್ನು ಸುಧಾರಿಸುವುದಾಗಿದ್ದು, ಇವು ಜುಲೈ 2025ರ ನಂತರದ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿವೆ.
ಎನ್ಪಿಸಿಐ ತಿದ್ದುಪಡಿಯು ಮುಂದಿನ ಹೇಳಿಕೆಯಲ್ಲಿ ಹೀಗೆ ತಿಳಿಸಿದ್ದು, “ಗ್ರಾಹಕನಿಗೆ ಉತ್ತಮ ಸೇವೆಯನ್ನು ನೀಡುವುದು ನಮ್ಮ ಮುಖ್ಯ ಗುರಿ. ಎಲ್ಲಾ ಸದಸ್ಯ ಬ್ಯಾಂಕುಗಳು ಮತ್ತು ಪಾವತಿ ಸೇವಾ ಪೂರೈಕೆದಾರರು ತಮಗಿರುವ ವ್ಯವಸ್ಥೆಗಳಲ್ಲಿ ತೊಂದರೆ ಇಲ್ಲದಂತೆ ತಕ್ಕಮಟ್ಟಿಗೆ ಬದಲಾವಣೆಗಳನ್ನು ಮಾಡಬೇಕು. ವ್ಯಾಪಾರಿಗಳು ಅಥವಾ ಪಾಲುದಾರ ಸಂಸ್ಥೆಗಳ ಮೂಲಕ ಯಾವುದೇ ತಾಂತ್ರಿಕ ಅವಲಂಬನೆಗಳು ಇದ್ದರೆ ಅವುಗಳೂ ಕೂಡ ನವೀಕರಿಸಬೇಕು.”
ಇದೇ ವೇಳೆ, ಮೇ 21, 2025 ರಂದು ಹೊರಡಿಸಿದ ಇನ್ನೊಂದು ಸುತ್ತೋಲೆಯಂತೆ, ಯುಪಿಐ ವ್ಯವಸ್ಥೆಗೆ ಸಂಬಂಧಿಸಿದಂತೆ ಇನ್ನಷ್ಟು ತಾಂತ್ರಿಕ ಬದಲಾವಣೆಗಳು ಮತ್ತು ಸುಧಾರಿತ ನಿಯಮಗಳು ಕೂಡ ಜಾರಿಗೆ ಬರಲಿವೆ. ಈ ಬದಲಾವಣೆಗಳು ಯುಪಿಐ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸಲಿದ್ದು, ವಹಿವಾಟಿನಲ್ಲಿ ತೊಂದರೆ ಅಥವಾ ವಿಳಂಬಗಳನ್ನು ತಡೆಯುವಲ್ಲಿ ಸಹಾಯಕವಾಗಲಿವೆ.














