ಮನೆ ಸುದ್ದಿ ಜಾಲ ಯುಪಿಎಸ್‌ಸಿ ಪರೀಕ್ಷೆ: ಅಂಧತ್ವದ ನಡುವೆಯೇ 425ನೇ ರ‍್ಯಾಂಕ್‌ ಪಡೆದ ಪಿರಿಯಾಪಟ್ಟಣದ ಕೆ.ಟಿ.ಮೇಘನಾ

ಯುಪಿಎಸ್‌ಸಿ ಪರೀಕ್ಷೆ: ಅಂಧತ್ವದ ನಡುವೆಯೇ 425ನೇ ರ‍್ಯಾಂಕ್‌ ಪಡೆದ ಪಿರಿಯಾಪಟ್ಟಣದ ಕೆ.ಟಿ.ಮೇಘನಾ

0

ಮೈಸೂರು (Mysuru)- ಸಾಧನೆ ಮಾಡುವ ಮನಸ್ಸಿದ್ದರೆ ಯಾವುದೇ ಅಡೆ-ತಡೆ, ಕಷ್ಟಗಳನ್ನು ಮೆಟ್ಟಿ ನಿತ್ತು ಸಾಧನೆ ಮಾಡುತ್ತಾರೆ. ಅದು ಅಂಗ ವೈಕಲ್ಯವಾದರೂ ಸರಿಯೇ ಸಾಧನೆಗೆ ಅಡ್ಡಿಯಾಗದು.

ಹೌದು, ಶೇ.90 ಅಂಧತ್ವವಿದ್ದರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಈಕೆ  425ನೇ ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕು ಕುಡಕೂರಿನ ಕೆ.ಟಿ.ಮೇಘನಾ 425ನೇ ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ. ಸದ್ಯ ಬೆಂಗಳೂರಿನ ಕಂದಾಯ ಭವನದಲ್ಲಿ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿದ್ದಾರೆ.

ಕೆಂಗೇರಿಯಲ್ಲಿ ವಾಸವಾಗಿರುವ ಅವರು, ತಾಂಡವಮೂರ್ತಿ ಹಾಗೂ ನವನೀತಾ ದಂಪತಿ ಪುತ್ರಿ. ಬೆಂಗಳೂರಿನ ಜ್ಞಾನಬೋಧಿನಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ, ಜೈನ್ ಕಾಲೇಜಿನಲ್ಲಿ ಪಿಯು, ಪದವಿಯನ್ನು ಸುರಾನಾ ಕಾಲೇಜು, ದೂರಶಿಕ್ಷಣದಲ್ಲಿ ಎಂ.ಎ ಇಂಗ್ಲಿಷ್‌ ಪದವಿ ಪಡೆದಿದ್ದಾರೆ.

ಎಸ್ಸೆಸ್ಸೆಲ್ಸಿ ನಂತರ ದೃಷ್ಟಿ ಕಳೆದುಕೊಂಡ ಮೇಘನಾ ಎಚ್‌ಎಸ್‌ಆರ್‌ ಲೇಔಟ್‌ನ ಮಿತ್ರಜ್ಯೋತಿ ಸಂಸ್ಥೆಯಲ್ಲಿ ಕಂಪ್ಯೂಟರ್‌ ತರಬೇತಿ ಪಡೆದರು. ನಂತರ ಸಿಸ್ಕೋ ಕಂಪನಿ ಸೇರಿದರು. ಜೊತೆಯಲ್ಲಿಯೇ ಪರೀಕ್ಷೆಗೆ ತಯಾರಿ ನಡೆಸಿದರು ಎಂದು ಮೇಘನಾ ತಂದೆ ಕೆ.ಎನ್‌.ತಾಂಡವಮೂರ್ತಿ ತಿಳಿಸಿದ್ದಾರೆ.

ಡಾ.ರಾಜ್‌ಕುಮಾರ್‌ ಐಎಎಸ್‌ ಅಕಾಡೆಮಿಯಲ್ಲಿ ಗಂಗರಾವ್‌, ಯುವ ರಾಜ್‌ಕುಮಾರ್‌ ಪ್ರೋತ್ಸಾಹಿಸಿದ್ದರು. 2020ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲೂ 465ನೇ ರ‍್ಯಾಂಕ್‌ ಪಡೆದಿದ್ದರು ಎಂದರು.