ಚಿತ್ರದುರ್ಗ: ಟಿಪ್ಪು ಸುಲ್ತಾನ್ ಹತ್ಯೆ ಮಾಡಿದ್ದು ಉರಿಗೌಡ ಹಾಗೂ ನಂಜೇಗೌಡ ಅವರದು ನೈಜ ಇತಿಹಾಸವೇ ಅಥವಾ ಕಾಲ್ಪನಿಕವೇ ಎಂಬುದನ್ನು ಮರುಪರಿಶೀಲನೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.
ಇತಿಹಾಸದ ಆಧಾರದ ಮೇರೆಗೆ ಬಿಜೆಪಿ ನಿಲುವು ತಳೆದಿದೆ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ಅನುಮಾನಗಳಿಲ್ಲ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅನಮಾನಗಳು ಇರುವಂತೆ ಕಾಣುತ್ತಿದೆ. ಮತ್ತೊಮ್ಮೆ ಪರಿಶೀಲಿಸಿ ಅನುಮಾನ ಬಗೆಹರಿಸಿಕೊಳ್ಳೋಣ. ಇತಿಹಾಸವನ್ನು ತಿರುಚಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಇತಿಹಾಸ ಹಾಗೂ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಯಾವುದೇ ಜಾತಿಯನ್ನು ಅವಹೇಳನ ಮಾಡುವುದು ಬಿಜೆಪಿ ಉದ್ದೇಶ ಅಲ್ಲ. ನಾನೂ ಒಕ್ಕಲಿಗ ಸಮುದಾಯದಿಂದ ಬಂದಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಜಾತಿ ರಾಜಕೀಯ ಮಾಡುವುದನ್ನು ಜೆಡಿಎಸ್ ಬಿಡಬೇಕು ಎಂದು ಹೇಳಿದರು.
ಜೆಡಿಎಸ್ ಪಕ್ಷ ಹಿಂದೆ ರಾಜ್ಯವ್ಯಾಪಿ ಇತ್ತು. ಬೀದರ್ ನಿಂದ ಚಾಮರಾಜನಗರ ಜಿಲ್ಲೆಯವರೆಗೆ ಪಕ್ಷ ಸದೃಢವಾಗಿತ್ತು. ಎಚ್.ಡಿ.ದೇವೇಗೌಡ ಅವರು ಈ ಪಕ್ಷವನ್ನು ಮಂಡ್ಯ ಮತ್ತು ಹಾಸನ ಜಿಲ್ಲೆಗೆ ಸೀಮಿತಗೊಳಿಸಿದ್ದಾರೆ. ಉರಿಗೌಡ ಮತ್ತು ನಂಜೇಗೌಡ ವಿಚಾರ ಬಿಟ್ಟು ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ ನಡೆಯಲಿ ಎಂದು ಸಲಹೆ ನೀಡಿದರು.
ಹೆದ್ದಾರಿ ನಿರ್ಮಾಣ ಹಾಗೂ ಟೋಲ್ ನಿರ್ಧಾರವನ್ನು ಕೇಂದ್ರದ ಹೆದ್ದಾರಿ ಪ್ರಾಧಿಕಾರ ತೆಗದುಕೊಳ್ಳುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಲಾಗಿದೆ. ಇದರಲ್ಲಿ ನಿಯಮ ಉಲ್ಲಂಘನೆ ಆಗಿದ್ದರೆ ಪ್ರಶ್ನೆ ಮಾಡುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ನ್ಯಾಯಾಲಯದ ಮೆಟ್ಟಿಲು ಏರಲು ಎಲ್ಲರಿಗೂ ಅವಕಾಶ ಇದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.