ಬೆಂಗಳೂರು: ಉರಿಗೌಡ–ನಂಜೇಗೌಡ ಸಿನಿಮಾ ನಿರ್ಮಾಣ ಮಾಡಲ್ಲ ಎಂದು ತೋಟಗಾರಿಕಾ ಸಚಿವರೂ ಆಗಿರುವ ನಿರ್ಮಾಪಕ ಮುನಿರತ್ನ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಕಥೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಆದ್ದರಿಂದ ಸದ್ಯ ಈ ಚಿತ್ರವನ್ನು ಕೈ ಬಿಡಲಾಗಿದೆ. ಚಿತ್ರ ಮಾಡುವುದಿಲ್ಲ ಎಂದು ಶ್ರೀಗಳಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ಉರಿಗೌಡ– ನಂಜೇಗೌಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದ ನಿರ್ಮಾಪಕ ಮುನಿರತ್ನ ಅವರನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೋಮವಾರ ಮಾತುಕತೆಗೆ ಕರೆದಿದ್ದರು.
ಉರಿಗೌಡ ಮತ್ತು ನಂಜೇಗೌಡ ವಿಚಾರ ರಾಜಕೀಯವಾಗಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಮುನಿರತ್ನ ಅವರು ಈ ಹೆಸರನ್ನು ನೋಂದಣಿ ಮಾಡಿಸಿ, ಚಲನಚಿತ್ರ ಮಾಡುವುದಾಗಿ ಘೋಷಿಸಿ, ಮುಹೂರ್ತದ ದಿನಾಂಕವನ್ನೂ ನಿಗದಿ ಮಾಡಿದ್ದರು.
ಮುನಿರತ್ನ ಅವರ ನಡೆಯನ್ನು ಜೆಡಿಎಸ್’ನ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಆಕ್ಷೇಪಿಸಿದ್ದರು.