ಮನೆ ಅಂತಾರಾಷ್ಟ್ರೀಯ ಮುಂಬೈ ದಾಳಿಯ ಆರೋಪಿ ತಹವ್ವೂರ್‌ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸಮ್ಮತಿ

ಮುಂಬೈ ದಾಳಿಯ ಆರೋಪಿ ತಹವ್ವೂರ್‌ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸಮ್ಮತಿ

0

ವಾಷಿಂಗ್ಟನ್‌: ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ತಹವ್ವೂರ್‌ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಅವರು ಗುರುವಾರ ಘೋಷಿಸಿದ್ದಾರೆ.

Join Our Whatsapp Group

 ದಾಳಿ ಕುರಿತ ವಿಚಾರಣೆ ಸಲುವಾಗಿ ಭಾರತೀಯ ತನಿಖಾ ಸಂಸ್ಥೆಗಳು, ರಾಣಾ ಹಸ್ತಾಂತರವನ್ನು ಎದುರು ನೋಡುತ್ತಿವೆ.

ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾಗಿರುವ ರಾಣಾ, ಸದ್ಯ ಲಾಸ್‌ ಏಂಜಲೀಸ್‌ನ ಮೆಟ್ರೊಪಾಲಿಟನ್‌ ಬಂಧನ ಕೇಂದ್ರದಲ್ಲಿದ್ದಾನೆ. ಈತ, ಮುಂಬೈ ಮೇಲೆ 2008ರ ನವೆಂಬರ್‌ 26ರಂದು ನಡೆದ (26/11) ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನ–ಅಮೆರಿಕನ್‌ ಉಗ್ರ ಡೇವಿಡ್‌ ಕೋಲ್ಮನ್‌ ಹೆಡ್ಲಿಯೊಂದಿಗೆ ನಂಟು ಹೊಂದಿದ್ದಾನೆ ಎನ್ನಲಾಗಿದೆ.

ಅಮೆರಿಕ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಟ್ರಂಪ್‌, ‘ಮುಂಬೈ ಮೇಲಿನ ಭಯಾನಕ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ, ಜಗತ್ತಿನ ಅತಿ ದುಷ್ಟರಲ್ಲಿ ಒಬ್ಬನನ್ನು (ತಹವ್ವೂರ್‌ ರಾಣಾನನ್ನು) ಭಾರತಕ್ಕೆ ಗಡೀಪಾರು ಮಾಡಲು ನನ್ನ ಆಡಳಿತವು ಅನುಮೋದನೆ ನೀಡಿದೆ ಎಂದು ಘೋಷಿಸುತ್ತಿದ್ದೇನೆ. ಹಾಗಾಗಿ, ವಿಚಾರಣೆ ಎದುರಿಸಲು ಆತ ಭಾರತಕ್ಕೆ ವಾಪಸ್‌ ಆಗಲಿದ್ದಾನೆ’ ಎಂದು ಹೇಳಿದ್ದಾರೆ.

ತನ್ನನ್ನು ಭಾರತಕ್ಕೆ ಹಸ್ತಾಂತರಿಸದಂತೆ ಕೋರಿ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್‌ ಜನವರಿಯಲ್ಲಿ ತಿರಸ್ಕರಿಸಿತ್ತು. ಆ ಮೂಲಕ ಪ್ರಕ್ರಿಯೆಯನ್ನು ಸುಗಮಗೊಳಿಸಿತ್ತು. ಅದರ ಬೆನ್ನಲ್ಲೇ, ರಾಣಾನನ್ನು ಸಾಧ್ಯವಾದಷ್ಟು ಬೇಗ, ಗಡೀಪಾರು ಮಾಡುವಂತೆ ಅಮೆರಿಕದ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ ಭಾರತ ಹೇಳಿತ್ತು.

ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಅಮೆರಿಕದ ಸುಪ್ರೀಂ ಕೋರ್ಟ್‌ ಜನವರಿ 21ರಂದು ನಿರಾಕರಿಸಿದೆ. ಮುಂಬೈ ದಾಳಿಯ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಅಮೆರಿಕದ ಅಧಿಕಾರಿಗಳೊಂದಿಗೆ ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಹೇಳಿದ್ದರು.

ಪಾಕಿಸ್ತಾನಿ ಭಯೋತ್ಪಾದಕರ ಗುಂಪು ಅರಬ್ಬೀ ಸಮುದ್ರದ ಮೂಲಕ 2008ರ ನವೆಂಬರ್ 26ರಂದು ರಾತ್ರಿ ಮುಂಬೈ ನಗರವನ್ನು ಪ್ರವೇಶಿಸಿದ್ದರು. ನಗರದ ರೈಲ್ವೆ ನಿಲ್ದಾಣ, ಎರಡು ಐಷಾರಾಮಿ ಹೋಟೆಲ್‌ಗಳು ಹಾಗೂ ಯಹೂದಿ ಕೇಂದ್ರದ ಮೇಲೆ ಸಂಘಟಿತ ದಾಳಿ ನಡೆಸಿ ದೇಶದಾದ್ಯಂತ ತಲ್ಲಣ ಸೃಷ್ಟಿಸಿದ್ದರು.

ಏಕಾಏಕಿ ನಡೆದ ಗುಂಡಿನಲ್ಲಿ ದಾಳಿಯಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ 166 ಜನರು ಮೃತಪಟ್ಟು 300 ಜನರು ಗಾಯಗೊಂಡಿದ್ದರು.

ದಾಳಿಯಲ್ಲಿ ಭಾಗಿಯಾಗಿದ್ದ 10 ಬಂದೂಕುಧಾರಿಗಳ ಪೈಕಿ 9 ಮಂದಿ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೇ ನಿಲ್ದಾಣದಲ್ಲಿ ಭದ್ರತಾ ಪಡೆಗಳು ನಡೆಸಿದ ಪ್ರತಿ ದಾಳಿ ವೇಳೆ ಹತ್ಯೆಯಾಗಿದ್ದರು. ಬದುಕುಳಿದಿದ್ದ ಒಬ್ಬ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ 2010ರಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಆತನನ್ನು, 2012ರಲ್ಲಿ ಪುಣೆಯಲ್ಲಿ ಗಲ್ಲಿಗೇರಿಸಲಾಯಿತು.