ವಾಷಿಂಗ್ಟನ್ : ಚೀನಾ ಸೇರಿದಂತೆ ರಷ್ಯಾದಿಂದ ತೈಲ ಖರೀದಿ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವಂತೆ ಅಮೆರಿಕ ತನ್ನ G7 ದೇಶಗಳಿಗೆ (7 ರಾಷ್ಟ್ರಗಳ ಒಕ್ಕೂಟ) ಕರೆ ನೀಡಿದೆ. ಉಕ್ರೇನ್ ವಿರುದ್ಧದ ಯುದ್ಧವನ್ನು ಸಕ್ರಿಯಗೊಳಿಸಲು ಬಯಸುವ ದೇಶಗಳ ಮೇಲೆ ಸಂಭಾವ್ಯ ಸುಂಕ ವಿಧಿಸುವ ಕುರಿತು 7 ರಾಷ್ಟ್ರಗಳ ಹಣಕಾಸು ಸಚಿವರು ಶುಕ್ರವಾರ ನಡೆದ ಜಿ7 ಸಭೆಯಲ್ಲಿ ಚರ್ಚಿಸಿದರು. ಕೆನಡಾ ಹಣಕಾಸು ಸಚಿವ ಫ್ರಾಂಕೋಯಿಸ್-ಫಿಲಿಪ್ ಷಾಂಪೇನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಭೆಯಲ್ಲಿ ಉಕ್ರೇನ್ ವಿರುದ್ಧ ಯುದ್ಧವನ್ನು ಕೊನೆಗಾಣಿಸಲು ರಷ್ಯಾದ ಮೇಲೆ ಸಾಧ್ಯವಾದಷ್ಟು ಒತ್ತಡ ಹೆಚ್ಚಿಸುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಜೊತೆಗೆ ರಷ್ಯಾದ ಯುದ್ಧದ ಪ್ರಯತ್ನಕ್ಕೆ ಸಹಕಾರ ನೀಡುತ್ತಿರುವ ದೇಶಗಳ ಮೇಲೆ ಮತ್ತಷ್ಟು ನಿರ್ಬಂಧ ಹಾಗೂ ಸುಂಕದಂತಹ ಆರ್ಥಿಕ ಕ್ರಮಗಳನ್ನು ಕೈಗೊಳ್ಳಲು ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ.
ಸಭೆಯ ಬಳಿಕ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್, ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದರು. ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಸುಂಕ ವಿಧಿಸಲು ಅಮೆರಿಕದೊಂದಿಗೆ ಸೇರಬೇಕು ಕರೆ ನೀಡಲಾಗಿದೆ. ಪುಟಿನ್ ಅವರ ಯುದ್ಧ ತಂತ್ರವನ್ನು ಕೊನೆಗೊಳಿಸಬೇಕಾದ್ರೆ ಹಣಕಾಸು ಒದಗಿಸುವುದನ್ನು ಕಡಿತಗೊಳಿಸಬೇಕು. ಅರ್ಥಹೀನ ಹತ್ಯೆಯನ್ನು ತಡೆಯಲು ಇದೊಂದೇ ಮಾರ್ಗ, ಆರ್ಥಿಕ ಒತ್ತಡ ಸೃಷ್ಟಿಸಿದ್ರೆ ಯುದ್ಧ ತಾನಾಗೇ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಅಮೆರಿಕದ ಖಜಾನೆ ವಕ್ತಾರರು, ಜಿ7 ಮತ್ತು ಯುರೋಪಿಯನ್ ಒಕ್ಕೂಟ ರಾಷ್ಟ್ರಗಳಿಗೆ ರಷ್ಯಾದ ತೈಲ ಖರೀದಿಯನ್ನ ನಿಲ್ಲಿಸುವಂತೆ ಒತ್ತಡ ಹೇರುವಂತೆ ಕರೆ ನೀಡಿದ್ದರು. ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದೆ. ಈ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಫಂಡಿಂಗ್ ಮಾಡುತ್ತಿದೆ ಅನ್ನೋದು ಟ್ರಂಪ್ ಅವರ ಬಲವಾದ ವಾದ. ಅದಕ್ಕಾಗಿ ಈ ಹಿಂದೆ ವಿಧಿಸಿದ್ದ 25% ಆಮದು ಸುಂಕವನ್ನ ಕಳೆದ ಆಗಸ್ಟ್ 27ರಿಂದ 50%ಗೆ ಏರಿಸಿದೆ. ಆದ್ರೆ ಪಾಕಿಸ್ತಾನದ ಆಮದಿನ ಮೇಲೆ ಟ್ರಂಪ್ 19% ಸುಂಕ ಮಾತ್ರ ವಿಧಿಸಿದ್ದಾರೆ ಎನ್ನಲಾಗಿದೆ.














