ಬರ್ಲಿನ್ : ಅಮೆರಿಕದ H-1B ವೀಸಾ ಶುಲ್ಕ ಹೆಚ್ಚಳ ವಿವಾದದ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಬಿಗ್ ಆಫರ್ ನೀಡಿದೆ. ವೃತ್ತಿಪರ ಪರಿಣತ ಭಾರತೀಯರಿಗೆ ಜರ್ಮನಿಗೆ ಬರಬಹುದು ಎಂದು ರಾಯಭಾರಿ ಸ್ವಾಗತ ಕೋರಿದ್ದಾರೆ.
ಎಲ್ಲಾ ಹೆಚ್ಚು ಕೌಶಲ್ಯಪೂರ್ಣ ಭಾರತೀಯರಿಗೆ ನನ್ನ ಕರೆ ಇಲ್ಲಿದೆ. ಜರ್ಮನಿ ತನ್ನ ಸ್ಥಿರ ವಲಸೆ ನೀತಿಗಳೊಂದಿಗೆ ಮತ್ತು ಐಟಿ, ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರಿಗೆ ಉತ್ತಮ ಉದ್ಯೋಗಾವಕಾಶ ಕಲ್ಪಿಸುತ್ತದೆ ಎಂದು ಫಿಲಿಪ್ ಅಕೆರ್ಮನ್ ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ವೀಡಿಯೋ ಕೂಡ ಹಂಚಿಕೊಂಡಿರುವ ಅಕೆರ್ಮನ್, ಜರ್ಮನಿಯಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಗುಂಪಿನಲ್ಲಿ ಭಾರತೀಯರು ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಜರ್ಮನಿಯಲ್ಲಿ ಕೆಲಸ ಮಾಡುವ ಭಾರತೀಯರು, ಸ್ಥಳೀಯ ಜರ್ಮನಿಯರಿಗಿಂತ ಹೆಚ್ಚು ಸಂಪಾದಿಸುತ್ತಾರೆ. ಏಕೆಂದರೆ, ಭಾರತೀಯರು ನಮ್ಮ ಸಮಾಜ ಮತ್ತು ನಮ್ಮ ಕಲ್ಯಾಣಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ, ಅವರಿಗೆ ಹೆಚ್ಚಿನ ಸಂಬಳ. ನಾವು ಕಠಿಣ ಪರಿಶ್ರಮದ ಜನರಿಗೆ ಉತ್ತಮ ಉದ್ಯೋಗಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಹೆಚ್-1ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿ ಅಮೆರಿಕ ಸರ್ಕಾರ ಆದೇಶ ಹೊರಡಿಸಿದೆ. ಅಮೆರಿಕದ ಸ್ಥಳೀಯರಿಗೆ ಮಣೆ ಹಾಕುವ ಉದ್ದೇಶದಿಂದ ಟ್ರಂಪ್ ಅವರು ಈ ಕ್ರಮಕೈಗೊಂಡಿದ್ದಾರೆ. ಇದರಿಂದ ಅಮೆರಿಕದಲ್ಲಿ ಉದ್ಯೋಗ ಬಯಸುವ ಭಾರತ ಸೇರಿದಂತೆ ಇತರೆ ದೇಶಗಳ ಪರಿಣತ ಉದ್ಯೋಗಿಗಳಿಗೆ ತೊಂದರೆ ಆಗಲಿದೆ.
ಇಷ್ಟು ಪ್ರಮಾಣದ ಹಣವನ್ನು ಅಮೆರಿಕ ಕಂಪನಿಗಳು ಭರಿಸಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಅಮೆರಿಕ ಕಂಪನಿಗಳು ಹಿಂದೇಟು ಹಾಕುವ ಸಾಧ್ಯತೆ ಹೆಚ್ಚಿದೆ. ಅಮೆರಿಕದಲ್ಲಿ ವಿದೇಶಿಯರಿಗೆ ಉದ್ಯೋಗಾವಕಾಶ ಕಡಿಮೆಯಾಗುವ ಸಾಧ್ಯತೆ ಇದೆ.















