ಮನೆ ಅಂತರಾಷ್ಟ್ರೀಯ ಅಮೆರಿಕದಲ್ಲಿ ಗುಂಡಿನ ದಾಳಿ: 5 ಮಂದಿ ಸಾವು

ಅಮೆರಿಕದಲ್ಲಿ ಗುಂಡಿನ ದಾಳಿ: 5 ಮಂದಿ ಸಾವು

0

ಒಕ್ಲಹೋಮಾ (Oklahoma)- ಅಮೆರಿಕದಲ್ಲಿ ಮತ್ತೊಂದು ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಬಂದೂಕು ಹಿಡಿದು ಬಂದ ವ್ಯಕ್ತಿಯೊಬ್ಬ ಆಸ್ಪತ್ರೆಯ ಆವರಣದಲ್ಲಿ ಗುಂಡಿನ ದಾಳಿ ನಡೆಸಿದ್ದು, 5 ಮಂದಿ ಸಾವಿಗೀಡಾಗಿರುವ ಘಟನೆ ನಡೆದಿದೆ.

ಒಕ್ಲಹೋಮಾದ ಟಲ್ಸಾದಲ್ಲಿರುವ ಸೇಂಟ್‌ ಫ್ರಾನ್ಸಿಸ್‌ ಆಸ್ಪತ್ರೆಯಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿಕೋರ ಸಹ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಆಸ್ಪತ್ರೆ ಕಟ್ಟಡದ ಎರಡನೇ ಮಹಡಿಯಲ್ಲಿ ವ್ಯಕ್ತಿಯೊಬ್ಬ ಬಂದೂಕು ಹಿಡಿದಿರುವ ಬಗ್ಗೆ ಕರೆ ಬಂದಿತ್ತು. ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಗುಂಡಿನ ದಾಳಿ ನಡೆದಿತ್ತು. ಹಂತಕನ ಬಳಿ ದೊಡ್ಡ ರೈಫಲ್‌ ಮತ್ತು ಪಿಸ್ತೂಲ್‌ ಇತ್ತು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೇ ತಿಂಗಳು ಅಮೆರಿಕದಲ್ಲಿ ನಡೆದ ಎರಡು ದೊಡ್ಡ ಸಾಮೂಹಿಕ ಗುಂಡಿನ ದಾಳಿಗಳ ಬೆನ್ನಲ್ಲೇ ಈ ದಾಳಿ ನಡೆದಿದೆ. ಕಳೆದ ವಾರ ಬಂದೂಕುದಾರಿಯೊಬ್ಬ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಗುಂಡಿಕ್ಕಿ ಕೊಂದ ಘಟನೆ ಟೆಕ್ಸಾಸ್‌ನಲ್ಲಿ ನಡೆದಿತ್ತು.

ನ್ಯೂಯಾರ್ಕ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಸೂಪರ್‌ಮಾರ್ಕೆಟ್‌ನಲ್ಲಿ ಬಂದೂಕು ಹಿಡಿದ ವ್ಯಕ್ತಿಯು 10 ಜನರನ್ನು ಬಲಿ ಪಡೆದಿದ್ದ. ಈ ಘಟನೆಗಳು ಬಂದೂಕು ನಿಯಂತ್ರಣದ ಕುರಿತು ಭಾರೀ ಚರ್ಚೆಯನ್ನು ಸೃಷ್ಟಿಸಿದೆ.