ನ್ಯೂಯಾರ್ಕ್/ ವಾಷಿಂಗ್ಟನ್: ಅಮೆರಿಕದ ಉತ್ಪನ್ನಗಳ ಮೇಲೆ ಭಾರತ, ಚೀನಾ ಸೇರಿದಂತೆ ಹಲವು ದೇಶಗಳು ವಿಧಿಸುವ ಹೆಚ್ಚಿನ ಸುಂಕದ ಬಗ್ಗೆ ಟೀಕಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದು ಅಮೆರಿಕಕ್ಕೆ ಆಗುತ್ತಿರುವ ಅನ್ಯಾಯ ಎಂದಿದ್ದಾರೆ. ಹೀಗಾಗಿ ವಿದೇಶಗಳು ವಿಧಿಸುವ ಸುಂಕದಷ್ಟೇ ಅವರ ಉತ್ಪನ್ನಗಳ ಮೇಲೂ ಅಮೆರಿಕ ಸುಂಕ ವಿಧಿಸಲಿದೆ ಎಂದು ಘೋಷಿಸಿದ್ದಾರೆ.
ಅಧ್ಯಕ್ಷರಾದ ಬಳಿಕ ಮೊದಲನೇ ಬಾರಿಗೆ ಕಾಂಗ್ರೆಸ್‌ನ (ಸಂಸತ್) ಜಂಟಿ ಅಧಿವೇಶನದಲ್ಲಿ ಮಾತನಾಡಿರುವ ಟ್ರಂಪ್, ಈ ಸುಂಕದ ನಿಯಮಗಳು ಏಪ್ರಿಲ್ 2ರಿಂದ ಜಾರಿಯಾಗಲಿವೆ ಎಂದಿದ್ದಾರೆ.
ಇತರ ದೇಶಗಳು ದಶಕಗಳಿಂದಲೂ ನಮ್ಮ ಉತ್ಪನ್ನಗಳ ಮೇಲೆ ಸುಂಕ ವಿಧಿಸುತ್ತಲೇ ಇವೆ, ಈಗ ಪ್ರತಿಯಾಗಿ ಸುಂಕ ವಿಧಿಸುವುದು ನಮ್ಮ ಸರದಿ. ಯುರೋಪಿಯನ್ ಒಕ್ಕೂಟ, ಚೀನಾ, ಬ್ರೆಜಿಲ್, ಭಾರತ, ಮೆಕ್ಸಿಕೊ, ಕೆನಡಾ ಸೇರಿದಂತೆ ಹಲವು ದೇಶಗಳು ನಾವು ಅವರ ಉತ್ಪನ್ನಗಳ ಮೇಲೆ ವಿಧಿಸುವುದಕ್ಕಿಂತ ಹೆಚ್ಚಿನ ಸುಂಕವನ್ನು ವಿಧಿಸುತ್ತಿವೆ, ಇದು ಅನ್ಯಾಯ ಎಂದು ಟ್ರಂಪ್ ಗುಡುಗಿದ್ದಾರೆ.
ಭಾರತ ದೇಶ ನಮ್ಮ ಮೇಲೆ ಶೇ 100ಕ್ಕಿಂತ ಹೆಚ್ಚಿನ ಸುಂಕ ವಿಧಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಶೀಘ್ರದಲ್ಲೇ ಭಾರತ ಮತ್ತು ಚೀನಾ ದೇಶಗಳಿಗೆ ಪ್ರತಿ ಸುಂಕ ವಿಧಿಸುವುದಾಗಿ ಫೆಬ್ರುವರಿಯಲ್ಲಿ ಟ್ರಂಪ್ ಹೇಳಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ, ಭಾರತದ ಮೇಲೆ ಅಮೆರಿಕ ಸುಂಕ ವಿಧಿಸುವುದು ಖಚಿತ. ಈ ಬಗ್ಗೆ ನನ್ನೊಂದಿಗೆ ಯಾರೂ ವಾದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ನಮ್ಮ ಉತ್ಪನ್ನಗಳ ಮೇಲೆ ಚೀನಾ ಸರಾಸರಿ ಎರಡು ಪಟ್ಟು ಹೆಚ್ಚು ಸುಂಕ ವಿಧಿಸುತ್ತಿದೆ. ಇನ್ನೊಂದೆಡೆ ದಕ್ಷಿಣ ಕೊರಿಯಾ ನಾಲ್ಕು ಪಟ್ಟು ಹೆಚ್ಚು ಸುಂಕ ವಿಧಿಸುತ್ತಿದೆ. ನಾವು ದಕ್ಷಿಣ ಕೊರಿಯಾಕ್ಕೆ ಮಿಲಿಟರಿ ಸೇರಿದಂತೆ ಇತರ ಹಲವು ಸಹಾಯ ಮಾಡುತ್ತೇವೆ ಆದರೆ, ಅವರು ಹೆಚ್ಚು ಸುಂಕ ವಿಧಿಸಿ ನಮ್ಮ ವೈರಿಯಂತೆ ನಡೆಸಿಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆಯು ಅಮೆರಿಕಕ್ಕೆ ನ್ಯಾಯಸಮ್ಮತವಲ್ಲ ಎಂದು ಹೇಳಿದ್ದಾರೆ.