ಮನೆ ಅಂತಾರಾಷ್ಟ್ರೀಯ ಭಾರತದ 2 ಸೇರಿ ಇರಾನ್‌ ನಿಂದ ತೈಲ ಸಾಗಿಸುತ್ತಿದ್ದ 35 ಹಡಗುಗಳಿಗೆ ಅಮೆರಿಕ ನಿರ್ಬಂಧ

ಭಾರತದ 2 ಸೇರಿ ಇರಾನ್‌ ನಿಂದ ತೈಲ ಸಾಗಿಸುತ್ತಿದ್ದ 35 ಹಡಗುಗಳಿಗೆ ಅಮೆರಿಕ ನಿರ್ಬಂಧ

0

ವಾಷಿಂಗ್ಟನ್:  ಭಾರತದ ಎರಡು ಕಂಪನಿಗಳು ಸೇರಿ ಇರಾನ್‌ನಿಂದ ಇತರೆ ದೇಶಗಳಿಗೆ ತೈಲ ಸರಬರಾಜು ಮಾಡುತ್ತಿದ್ದ 35 ಕಂಪನಿಗಳು ಮತ್ತು ಹಡಗುಗಳಿಗೆ ಅಮೆರಿಕ ನಿರ್ಬಂಧ ವಿಧಿಸಿದೆ.

Join Our Whatsapp Group

ಭಾರತ ಮೂಲದ PHONIX ಹಡಗಿನ ಕಾರ್ಯಾಚರಣೆ ನಡೆಸುವ ವಿಷನ್ ಶಿಪ್ ಮ್ಯಾನೇಜ್‌ಮೆಂಟ್ ಎಲ್‌ಎಲ್‌ಪಿ ಮತ್ತು ಟೈಟ್‌ಶಿಪ್ ಶಿಪ್ಪಿಂಗ್ ಮ್ಯಾನೇಜ್‌ಮೆಂಟ್ (ಒಪಿಸಿ) ಪ್ರೈವೇಟ್ ಲಿಮಿಟೆಡ್ ಅನ್ನು ನಿರ್ಬಂಧಿಸಲಾಗಿದೆ.

PHONIX 2022ರಿಂದ ಲಕ್ಷಾಂತರ ಬ್ಯಾರೆಲ್ ಇರಾನಿನ ಕಚ್ಚಾ ತೈಲವನ್ನು ಸಾಗಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್, ಚೀನಾ, ಲೈಬೀರಿಯಾ, ಚೀನಾ, ಹಾಂಗ್ ಕಾಂಗ್ ಇತರ ದೇಶದ ಕಂಪನಿಗಳು ಮತ್ತು ಹಡಗುಗಳಿಗೂ ನಿರ್ಬಂಧ ವಿಧಿಸಲಾಗಿದೆ.

ಅಕ್ಟೋಬರ್ 1ರಂದು ಇಸ್ರೇಲ್ ವಿರುದ್ಧ ಇರಾನ್ ನಡೆಸಿದ ದಾಳಿಯ ನಂತರ ಇರಾನ್‌ನ ಪೆಟ್ರೋಲಿಯಂ ವಲಯದ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗಿತ್ತು. ಇದೀಗ, ಪರಮಾಣು ಅಸ್ತ್ರಗಳ ಬಳಕೆ ಬಗ್ಗೆ ಇರಾನ್ ಘೋಷಿಸಿದ ಬೆನ್ನಲ್ಲೆ ಮತ್ತಷ್ಟು ನಿರ್ಬಂಧ ವಿಧಿಸಲಾಗಿದೆ ಎಂದು ಅಮೆರಿಕ  ತಿಳಿಸಿದೆ.

ಪೆಟ್ರೋಲಿಯಂ ಆದಾಯವು ಇರಾನ್ ಸರ್ಕಾರಕ್ಕೆ ತನ್ನ ಪರಮಾಣು ಕಾರ್ಯಕ್ರಮಕ್ಕೆ ಸಂಪನ್ಮೂಲಗಳನ್ನು ಒದಗಿಸುತ್ತದೆ. ಸುಧಾರಿತ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತದೆ. ಅವುಗಳನ್ನು ಸದ್ಯ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುತ್ತದೆ ಎಂದು ಅದು ಹೇಳಿದೆ.

‘ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಅಭಿವೃದ್ಧಿ, ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಮಾನವರಹಿತ ವೈಮಾನಿಕ ವಾಹನ ತಂತ್ರಜ್ಞಾನದ ಪ್ರಸರಣ ಮತ್ತು ಪ್ರಾದೇಶಿಕ ಭಯೋತ್ಪಾನೆಗೆ ತನ್ನ ಪೆಟ್ರೋಲಿಯಂ ವ್ಯಾಪಾರದಿಂದ ಬರುವ ಆದಾಯವನ್ನು ಬಳಸುತ್ತಿದೆ. ಈ ಮೂಲಕ ಈ ಪ್ರದೇಶದಲ್ಲಿ ಮತ್ತಷ್ಟು ಅಸ್ಥಿರತೆಯ ಅಪಾಯವಿದೆ’ಎಂದು ಭಯೋತ್ಪಾದನೆ ಮತ್ತು ಹಣಕಾಸು ಗುಪ್ತಚರ ವಿಭಾಗದ ಹಂಗಾಮಿ ಅಧೀನ ಕಾರ್ಯದರ್ಶಿ ಬ್ರಾಡ್ಲಿ ಟಿ ಸ್ಮಿತ್ ಹೇಳಿದ್ದಾರೆ.

ನಮ್ಮ ಅಧಿಕಾರ ಮತ್ತು ತಂತ್ರಜ್ಞಾನ ಬಳಸಿಕೊಂಡು ಈ ಅಕ್ರಮ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಹಡಗುಗಳು ಮತ್ತು ನಿರ್ವಾಹಕರಿಗೆ ತಡೆಹಾಕಲು ಅಮೆರಿಕ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.