ಮನೆ ರಾಜ್ಯ ಕಾಡಾನೆ ಕಾರ್ಯಾಚರಣೆಗೆ ಅರ್ಜುನನ ಬಳಕೆ ಕಾನೂನು ಬಾಹಿರ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದಿನೇಶ್‌ ಗೂಳಿಗೌಡ ಆಗ್ರಹ

ಕಾಡಾನೆ ಕಾರ್ಯಾಚರಣೆಗೆ ಅರ್ಜುನನ ಬಳಕೆ ಕಾನೂನು ಬಾಹಿರ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದಿನೇಶ್‌ ಗೂಳಿಗೌಡ ಆಗ್ರಹ

0

ಮೈಸೂರು: ಸುಪ್ರೀಂ ಕೋರ್ಟ್‌ ಆದೇಶವಿದ್ದರೂ ಅದನ್ನು ಮೀರಿ ಅರ್ಜುನ ಆನೆಯನ್ನು ಕಾರ್ಯಾಚರಣೆಗೆ ಬಳಕೆ ಮಾಡಿರುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ತಪ್ಪಿತಸ್ಥರ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಹೀಗೆ ಆಗದಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ  ಪತ್ರ ಬರೆದು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ದಿನೇಶ್ ಗೂಳಿಗೌಡ, ವಿಶ್ವ ವಿಖ್ಯಾತ ಮೈಸೂರು ದಸರೆಯಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನು ಕಾಡಾನೆ ಸೆರೆ, ರೆಡಿಯೊ ಕಾಲರ್ ಅಳವಡಿಕೆ ಕಾರ್ಯಾಚರಣೆ ವೇಳೆ ಮೃತಪಟ್ಟಿರುವುದು ನಿಜಕ್ಕೂ ದುಃಖಕರ ವಿಷಯವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಾಳೆಕೆರೆ ಫಾರೆಸ್ಟ್‌ ನಲ್ಲಿ ಸೋಮವಾರ ನಡೆದ ಕಾರ್ಯಾಚರಣೆ ವೇಳೆ ಅರ್ಜುನ ಮೃತಪಟ್ಟಿದ್ದಾನೆ. ಆದರೆ, ಇಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಪಾಲನೆ ಆಗಿಲ್ಲ. ಅದನ್ನು ಮೀರಿ ಅರ್ಜುನನನ್ನು ಕಾರ್ಯಾಚರಣೆಗೆ ಬಳಸಿರುವುದು ಕಾನೂನು ಬಾಹಿರವಾಗಿದೆ.

60 ವರ್ಷ ಮೇಲ್ಪಟ್ಟ ಪ್ರಾಣಿಗಳ ಮೇಲೆ ಭಾರ ಹೊರಿಸುವ ಕೆಲಸ ಮಾಡಬಾರದು. ಕಾರ್ಯಾಚರಣೆಗಳಿಗೆ ಬಳಸಕೂಡದು ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆ ಆದೇಶ ಮಾಡಿತ್ತು. ಈಗ ಅರ್ಜುನನಿಗೆ 64 ವರ್ಷವಾಗಿತ್ತು. ಇದೇ ಕಾರಣಕ್ಕಾಗಿಯೇ ಮೈಸೂರು ದಸರಾದಲ್ಲಿ ಅರ್ಜುನನಿಗೆ 750 ಕೆ.ಜಿ. ತೂಕದ ಅಂಬಾರಿಯನ್ನು ಹೊರಿಸದಿರುವ ನಿರ್ಧಾರಕ್ಕೆ ಬರಲಾಗಿತ್ತು. 2012 ರಿಂದ 2019 ರವರೆಗಿನ ಮೈಸೂರು ದಸರಾ ಉತ್ಸವದ ಒಟ್ಟು 8 ಬಾರಿ ಅರ್ಜುನ ಆನೆ ಅಂಬಾರಿ ಹೊತ್ತಿತ್ತು.

ಹೀಗಾಗಿ ಅರ್ಜುನನನ್ನು ಅಂಬಾರಿ ಹೊರುವ ಜವಾಬ್ದಾರಿಯಿಂದ ಹೊರಗಿಡಲಾಗಿತ್ತು. ಆದರೆ, ಈ ನಿಯಮಗಳನ್ನು ಮೀರಿ, ಅನುಭವ ಇದೆ ಎಂಬ ಕಾರಣಕ್ಕಾಗಿ ಈಗ ಕಾರ್ಯಾಚರಣೆಗೆ ಬಳಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಕಾರ್ಯಾಚರಣೆಗೆ ಬಳಕೆ ಮಾಡುವಾಗ ಅವುಗಳ ಸಾಮರ್ಥ್ಯವನ್ನು ನೋಡಿಕೊಳ್ಳಬೇಕು. ಆನೆ ಸೆರೆ ಕಾರ್ಯಾಚರಣೆ ಎಂದರೆ ಸುಲಭದ ಮಾತಲ್ಲ. ಅಲ್ಲಿ ಇಂತಹ ಪ್ರತಿ ದಾಳಿಗಳು ಪುಂಡಾನೆಗಳಿಂದ ಆಗುತ್ತವೆ. ಅದನ್ನು ತಡೆಯುವಂತಹ, ನಿಭಾಯಿಸುವಂತಹ ಶಕ್ತಿ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಆನೆಗೆ ಇರಬೇಕು. ಆದರೆ, ಅರ್ಜುನನಿಗೆ ಈಗಾಗಲೇ ವಯಸ್ಸು ಆಗಿರುವುದರಿಂದ ಇದನ್ನು ತಡೆಯುವ ಶಕ್ತಿ ಇದೆಯೇ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕಿತ್ತು. ಅದಕ್ಕಿಂತಲೂ ಮುಖ್ಯವಾಗಿ ಸುಪ್ರೀಂ ಕೋರ್ಟ್‌ ಆದೇಶವನ್ನು ಪರಿಗಣಿಸಬೇಕು. ಇದ್ಯಾವುದನ್ನೂ ಮಾಡದೆ ಕಾರ್ಯಾಚರಣೆಗೆ ನೇರವಾಗಿ ಇಳಿಸಿದ್ದರಿಂದ ಈ ಅನಾಹುತ ಆಗಿದೆ.

ಹೀಗಾಗಿ ಇಂತಹ ಕೆಲಸಕ್ಕೆ ಬಳಕೆ ಮಾಡಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಈ ರೀತಿಯ ಪ್ರಕರಣಗಳು ಮತ್ತೆ ಮರುಕಳಿಸಬಾರದು. ಆ ನಿಟ್ಟಿನಲ್ಲಿ ಸೂಚನೆ ನೀಡಬೇಕು ಎಂದು ದಿನೇಶ್‌ ಗೂಳಿಗೌಡ ಮನವಿ ಮಾಡಿದ್ದಾರೆ.