ರಾಮನಗರ: ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಮ್ಮೇಳಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಿಸಿದ್ದಾರೆ. ರಾಜಕೀಯ ಕಾರ್ಯಕ್ರಮಕ್ಕೆ ರಾಜ್ಯದ ಹಿರಿಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಸರಿಯಲ್ಲ, ಅಧಿಕಾರಿಗಳು ಜನರ ಕೆಲಸ ಮಾತ್ರ ಮಾಡಬೇಕು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರು ಕೂಡ ರಾಜಕೀಯವನ್ನೇ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ಮಾಡುತ್ತಿದ್ದಾರಾ? ಅವರ ರಾಜಕೀಯ ಸಂಘಟನೆಗೆ ಹಿರಿಯ ಅಧಿಕಾರಿಗಳನ್ನ ಬಳಿಸಿಕೊಂಡಿದ್ದಾರೆ. 40 ವರ್ಷದಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ಅತಿಥಿಗಳನ್ನು ಸ್ವಾಗತ ಕೋರಲು ಬಳಸಿಕೊಂಡು ಕೆಟ್ಟ ಸಂಪ್ರದಾಯ ಹುಟ್ಟಾಕಿದ್ದಾರೆ. ಅಧಿಕಾರಿಗಳನ್ನು ಪಕ್ಷದ ಕಾರ್ಯಕರ್ತರ ರೀತಿ ಬಳಕೆ ಮಾಡಿಕೊಂಡಿರುವುದಕ್ಕೆ ಸರ್ಕಾರ ಉತ್ತರ ನೀಡಬೇಕು ಎಂದರು.
ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸರ್ಕಾರದ ವಿರುದ್ದ ಕುಮಾರಸ್ವಾಮಿ ಆರೋಪ ಮಾಡಿತ್ತಿದ್ದಾರೆ ಎಂಬ ವಿಚಾರಕ್ಕೆ ಮಾತನಾಡಿ, ನಾವು ಗೆದ್ದಿರುವುದು ಕೇವಲ 19 ಸ್ಥಾನ. ನಾನು ವಿರೋಧ ಪಕ್ಷದ ನಾಯಕ ಆಗಲು ಹೇಗೆ ಸಾಧ್ಯ? ಬಿಜೆಪಿ ಅವರು 65 ಸ್ಥಾನ ಗೆದ್ದಿದ್ದಾರೆ. ವಿರೋಧ ಪಕ್ಷದ ಸ್ಥಾನಕ್ಕೂ ನನಗೂ ಏನು ಸಂಬಂಧ? ನಾನು ನಾಡಿನ ವಿರೋಧ ಪಕ್ಷದ ಸದಸ್ಯ ನಾಯಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.