ಮನೆ ವ್ಯಾಯಾಮ ಡೆಂಬಲ್ಸ್ ವ್ಯಾಯಾಮದ ಉಪಯೋಗಗಳು

ಡೆಂಬಲ್ಸ್ ವ್ಯಾಯಾಮದ ಉಪಯೋಗಗಳು

0

ಜಿಮ್‌ ವ್ಯಾಯಾಮಗಳಲ್ಲಿ ಒಂದಾದ ಡೆಂಬಲ್ಸ್‌ ವ್ಯಾಯಾಮ ಮುಖ್ಯ. ಡೆಂಬಲ್ಸ್‌ ವ್ಯಾಯಾಮ ಏನೆಲ್ಲಾ ಉಪಯೋಗಗಳಿಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಡೆಂಬಲ್ಸ್‌ ವ್ಯಾಯಾಮ ಮಾಡುವಾಗ ಎಚ್ಚರಿಕೆವಹಿಸಿ. ಇಲ್ಲವಾದರೆ ಸ್ನಾಯುಗಳು ಉಳುಕುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆರಂಭದಲ್ಲಿ ತರಬೇತಿ ಪಡೆಯಿರಿ.

ಡೆಂಬಲ್ಸ್‌ ವ್ಯಾಯಾಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ್ನು ಸುಡುತ್ತದೆ. ಕನಿಷ್ಟ ಅರ್ಧಗಂಟೆ ವ್ಯಾಯಾಮ ಮಾಡುವುದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ, ಅಂದರೆ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ನಷ್ಟವನ್ನು ಸುಧಾರಿಸುತ್ತದೆ. ನೀವು ಗಳಿಸುವ ಪ್ರತಿ ಪೌಂಡ್ ಸ್ನಾಯುವಿಗೆ, ದಿನಕ್ಕೆ 30 ರಿಂದ 50 ಕ್ಯಾಲೊರಿಗಳನ್ನು ಸುಡುತ್ತೀರಿ.

ಡೆಂಬಲ್ಸ್‌ ವ್ಯಾಯಾಮ ಅಂದುಕೊಂಡಷ್ಟು ಸುಲಭವಲ್ಲ. ಆದರೆ ಇದರಿಂದ ತೋಳು, ತೊಡೆ, ಸೊಂಟದ ಭಾಗದ ಬೊಜ್ಜು ಕರಗಿ ಆರೋಗ್ಯವಾಗಿರಬಹುದು. ಪ್ರತಿದಿನ ಕನಿಷ್ಟ 15 ರಿಂದ 20 ನಿಮಿಷವಾದರೂ ಡೆಂಬಲ್ಸ್ ವ್ಯಾಯಾಮ ಮಾಡಿ. ಸ್ನಾಯುಗಳಲ್ಲಿ ರಕ್ತಸಂಚಾರ ಸುಗಮವಾಗಿ ಆಗುವಂತೆ ಮಾಡುವಲ್ಲಿ ಡೆಂಬಲ್ಸ್‌ ವ್ಯಾಯಾಮ ಸಹಾಯ ಮಾಡುತ್ತದೆ.

ಡೆಂಬಲ್ಸ್‌ ವ್ಯಾಯಾಮ ದೇಹದಲ್ಲಿ ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತ ಸಂಚಾರವನ್ನು ಉತ್ತೇಜಿಸುತ್ತದೆ. ಇದರಿಂದ ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಕಾಡುವುದನ್ನು ತಪ್ಪಿಸಬಹುದು. ಅಲ್ಲದೆ ಹೃದಯಕ್ಕೆ ಸಂಬಂಧಿಸಿದ ಆರೋಗ್ಯವನ್ನೂ ಕೂಡ ಕಾಪಾಡಿಕೊಳ್ಳಬಹುದಾಗಿದೆ. ಇದರ ಜೊತೆಗೆ ಕುತ್ತಿಗೆ, ತೋಳಿನ ಭಾಗದಲ್ಲಿ ಫಿಟ್‌ ಆಗಿರುವಂತೆ ಡೆಂಬಲ್ಸ್‌ ವ್ಯಾಯಾಮ ನೋಡಿಕೊಳ್ಳುತ್ತದೆ.

ಡೆಂಬಲ್ಸ್‌ ವ್ಯಾಯಾಮ ಮಾನಸಿಕ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ. ಮಾನಸಿಕವಾಗಿ ಸದೃಢರಾಗಿದ್ದರೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ದೇಹದ ತೂಕ ಹೆಚ್ಚಾಗುವುದನ್ನು ತಡೆಯಬಹುದಾಗಿದೆ. ದೇಹದಲ್ಲಿ ಬೊಜ್ಜು ಬೆಳೆಯಲು ಅಧಿಕ ಮಾನಸಿಕ ಒತ್ತಡ ಕೂಡ ಕಾರಣವಾಗುತ್ತದೆ. ಇದನ್ನು ತಡೆಯಲು ಡೆಂಬಲ್ಸ್‌ ವ್ಯಾಯಾಮ ಸಹಕಾರಿಯಾಗಿದೆ. ವ್ಯಾಯಾಮದಿಂದ ದೇಹಕ್ಕೆ ಆರಾಮದಾಯಕ ಅನುಭವವಾಗುತ್ತದೆ. ಹೀಗಾಗಿ ಒತ್ತಡ ಮುಕ್ತರಾಗಿರುವ ಅನುಭವವೂ ಮೂಡುತ್ತದೆ.

ಡೆಂಬಲ್ಸ್‌ ವ್ಯಾಯಾಮ ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. ವ್ಯಾಯಾಮದ ಬಳಿಕ ಇಡೀ ದೇಹಕ್ಕೆ ರಕ್ತ ಸಂಚರಿಸುತ್ತದೆ. ಬಿಗಿಯಾದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಇದರಿಂದ ನಿದ್ದೆ ಉತ್ತಮವಾಗಿ ಬರುತ್ತದೆ. ಹೀಗಾಗಿ ನಿಮ್ಮ ದೇಹದ ತೂಕ ನಷ್ಟದ ವ್ಯಾಯಾಮಗಳ ಪಟ್ಟಿಯಲ್ಲಿ ಡೆಂಬಲ್ಸ್‌ನ್ನು ಸೇರಿಸಲು ಮರೆಯದಿರಿ.