ಉತ್ತರ ಪ್ರದೇಶದಲ್ಲಿ 2021ರಲ್ಲಿ ನಡೆದಿದ್ದ ಗ್ರಾಮ ಪಂಚಾಯತ್ ಚುನಾವಣೆ ವೇಳೆ ಅಕ್ರಮ ಎಸಗಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಚುನಾವಣೆಯಲ್ಲಿನ ಪ್ರತಿಯೊಂದು ಮತಕ್ಕೂ ತನ್ನದೇ ಆದ ಮೌಲ್ಯ ಇದ್ದು, ಅಂತಿಮ ಫಲಿತಾಂಶ ಏನೇ ಇದ್ದರೂ ಅದನ್ನು ರಕ್ಷಿಸಬೇಕು ಎಂದು ಈಚೆಗೆ ತಿಳಿಸಿದೆ.
ಚುನಾವಣೆಯ ಸಮಗ್ರತೆ ಬಗ್ಗೆ ಅನುಮಾನ ಮೂಡಿಸುವ ನಿರ್ಣಾಯಕ ದಾಖಲೆಗಳು ಕಾಣೆಯಾಗಿದ್ದು ಘೋಷಿಸಲಾದ ಮತಗಳಲ್ಲಿ ವಿವರಿಸಲಾಗದ ಅಂತರವಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ನೊಂಗ್ಮೇಕಪಮ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಹೇಳಿದೆ.
ಚುನಾವಣೆ ವೇಳೆ ಚಲಾವಣೆಯಾದ ಮತಗಳ ಮರುಎಣಿಕೆಗೆ ಉಪ-ವಿಭಾಗಾಧಿಕಾರಿ ನೀಡಿದ್ದ ಆದೇಶವನ್ನು ನ್ಯಾಯಾಲಯ ಮತ್ತೆ ಜಾರಿಗೊಳಿಸಿತು.
ಮತದಾನದ ಪ್ರಮುಖ ದಾಖಲೆಯಾದ ಮತಗಟ್ಟೆ ಅಧಿಕಾರಿಯ ದಿನಚರಿ ಇಲ್ಲದಿರುವುದು ಮತ್ತು ಮೌಖಿಕ ಮತ್ತು ಅಧಿಕೃತ ಮತಗಳ ಎಣಿಕೆಯ ನಡುವೆ 19 ಮತಗಳ ಹೊಂದಾಣಿಕೆ ಇಲ್ಲದಿರುವುದರಿಂದ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕಿದೆ ಎಂದು ಅದು ತೀರ್ಪು ನೀಡಿತು.
“ಚುನಾವಣೆಯಲ್ಲಿನ ಪ್ರತಿಯೊಂದು ಮತಕ್ಕೂ ತನ್ನದೇ ಆದ ಮೌಲ್ಯ ಇದ್ದು, ಅಂತಿಮ ಫಲಿತಾಂಶ ಏನೇ ಇದ್ದರೂ ಅದನ್ನು ರಕ್ಷಿಸಬೇಕು. ಮತಗಟ್ಟೆ ಅಧಿಕಾರಿಗಳ ದಾಖಲೆ ಕಾಣೆಯಾಗಿದ್ದರೆ ಮತ್ತು ಪರಿಶೀಲನೆ ನಡೆಸಲು ಸಾಧ್ಯವಾಗದಿದ್ದರೆ ಅಂತಿಮ ಫಲಿತಾಂಶ ಪ್ರಶ್ನಾರ್ಹವಾಗಿರುತ್ತದೆ ಎಂದು ಪರಿಗಣಿಸಬೇಕಿದೆ. ಚುನಾವಣೆಗೆ ಸಂಬಂಧಿಸಿದ ಪ್ರತಿಯೊಂದು ದಾಖಲೆಯೂ ಮುಖ್ಯವಾಗಿದ್ದು ಅದನ್ನು ಸಂರಕ್ಷಿಸಲು ಎಲ್ಲಾ ಪ್ರಯತ್ನ ಮಾಡಬೇಕು” ಎಂದು ನ್ಯಾಯಾಲಯ ಹೇಳಿದೆ.
ಅಧಿಕಾರದಲ್ಲಿ ಯಾರಿದ್ದಾರೆ ಎಂಬುದು ನ್ಯಾಯಾಲಯದ ಕಾಳಜಿ ಅಲ್ಲ ಬದಲಿಗೆ ಅವರು ಅಧಿಕಾರಕ್ಕೆ ಹೇಗೆ ಬಂದರು ಎಂಬುದು ತನ್ನಕಾಳಜಿಯಾಗಿದೆ ಎಂದು ಅದು ವಿವರಿಸಿದೆ.
ಮರು ಮತ ಎಣಿಕೆಗೆ ಉಪ ವಿಭಾಗಾಧಿಕಾರಿ ನೀಡಿದ್ದ ಆದೇಶವನ್ನು ಅಲಾಹಾಬಾದ್ ಹೈಕೋರ್ಟ್ 2023ರಲ್ಲಿ ರದ್ದುಗೊಳಿಸಿತ್ತು. ಮರುಎಣಿಕೆ ಸಮರ್ಥಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಿತ್ತು. ಇದೀಗ ಹೈಕೋರ್ಟ್ ತೀರ್ಪು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ಮರುಎಣಿಕೆಗೆ ದಿನಾಂಕ ಪ್ರಕಟಿಸುವಂತೆ ಸೂಚಿಸಿತು.
ಮರುಎಣಿಕೆಯ ನಂತರ ಗೆಲುವಿನ ಅಂತರ ಪರಿಣಾಮ ಬೀರದಿದ್ದರೂ ಸಹ, ಪ್ರಾಥಮಿಕವಾಗಿ ಚುನಾವಣೆಯಲ್ಲಿ ಗಮನಾರ್ಹ ಅಕ್ರಮಗಳು ನಡೆದಿವೆ ಎಂದು ಪುರಾವೆಗಳು ಬಹಿರಂಗಪಡಿಸಿದಾಗ, ಮತಗಳ ಮರುಎಣಿಕೆಗೆ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.