ಡೆಹ್ರಾಡೂನ್ (Dehradun): ಬಸ್ಸೊಂದು ಕಂದಕಕ್ಕೆ ಉರುಳಿಬಿದ್ದು 28 ಮಂದಿ ಮೃತಪಟ್ಟಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಸುಮಾರು 40 ಯಾತ್ರಾರ್ಥಿಗಳನ್ನು ಹೊತ್ತಿದ್ದ ಬಸ್ ಯಮುನೋತ್ರಿ ಕಡೆಗೆ ಪ್ರಯಾಣಿಸುತ್ತಿತ್ತು. ಬಸ್ ಉತ್ತರಾಖಂಡದ ದಮ್ತಾದಲ್ಲಿ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ಬಳಿ ಕಮರಿಗೆ ಬಿದ್ದಿದ್ದು ದುರಂತದಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ.
ಮಧ್ಯಪ್ರದೇಶದ ಯಾತ್ರಾರ್ಥಿಗಳು ಯಮುನೋತ್ರಿಗೆ ತೆರಳುತ್ತಿದ್ದರು. ಸದ್ಯ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಯಾತ್ರಾರ್ಥಿಗಳ ಸಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ. ಉತ್ತರಾಖಂಡದಲ್ಲಿ ಭಕ್ತರ ಬಸ್ ಕಮರಿಗೆ ಬಿದ್ದ ಬಗ್ಗೆ ಕೇಳಲು ತುಂಬಾ ದುಃಖವಾಗಿದೆ. ನಾನು ಈ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರೊಂದಿಗೆ ಮಾತನಾಡಿದ್ದೇನೆ. ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. NDRF ಕೂಡ ಶೀಘ್ರದಲ್ಲೇ ಅಲ್ಲಿಗೆ ತಲುಪುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಘಟನೆ ಬಗ್ಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ದೆಹಲಿಯಲ್ಲಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಉತ್ತರಾಖಂಡ್ ಗೆ ತೆರಳಿದ್ದು, ಮೃತಪಟ್ಟಿರುವ ಮಧ್ಯಪ್ರದೇಶ ಮೂಲದ ವ್ಯಕ್ತಿಗಳ ಪಾರ್ಥಿವ ಶರೀರವನ್ನು ತವರಿಗೆ ತರಲು ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವ ಕ್ರಮ ಕೈಗೊಂಡಿದ್ದಾರೆ, ಅಧಿಕಾರಿಗಳೊಂದಿಗೆ ಮುಖ್ಯ ಕಾರ್ಯದರ್ಶಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಮೃತರ ಕುಟುಂಬ ಸದಸ್ಯರಿಗೆ 5 ಲಕ್ಷ ರೂಪಾಯಿ, ಗಾಯಾಳುಗಳಿಗೆ 50,000 ರೂಪಾಯಿಗಳನ್ನು ಸಿಎಂ ಚೌಹಾಣ್ ಘೋಷಿಸಿದ್ದಾರೆ.