ಉತ್ತರಾಖಂಡ : ಕೆಲವು ಧಾರ್ಮಿಕ ಸ್ಥಳಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಪ್ರಸ್ತಾಪಿಸಿರುವ ಉತ್ತರಾಖಂಡ ಹೈಕೋರ್ಟ್ ಪರಿಸ್ಥಿತಿ ಚಿಂತಾಜನಕವಾಗಿದ್ದು, ದೇಗುಲ ಮತ್ತು ಆಶ್ರಮಗಳಲ್ಲಿ ದಿಢೀರ್ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದೆ.
ಮಹಿಳೆಯೊಂದಿಗೆ ಸಹಜೀವನ ನಡೆಸುತ್ತಿರುವ ಆರೋಪವೂ ಸೇರಿದಂತೆ ಮಾ ಚಂಡಾ ದೇವಿ ದೇಗುಲದ ಮುಖ್ಯ ಅರ್ಚಕರ ವಿರುದ್ಧ ದಾಖಲಾಗಿರುವ ವಿವಿಧ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ರಾಕೇಶ್ ತಪ್ಲಿಯಾಲ್ ಈ ನಿರ್ದೇಶನ ನೀಡಿದ್ದಾರೆ. ದೇವಾಲಯ ನಿರ್ವಹಿಸುತ್ತಿರುವವರ ವಿರುದ್ಧ ಇಂತಹ ಹಲವು ಅಪರಾಧ ಪ್ರಕರಣಗಳು ದಾಖಲಾಗುತ್ತಿರುವುದನ್ನು ಗಮನಿಸಿರುವುದಾಗಿ ನ್ಯಾಯಾಲಯ ತಿಳಿಸಿದೆ.
ಅಂತೆಯೇ ಧಾರ್ಮಿಕ ಸ್ಥಳಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತು ಪರಿಶೀಲಿಸಲು ದಿಢೀರ್ ತಪಾಸಣೆ ನಡೆಸಲು ತಂಡ ರಚಿಸುವಂತೆ ಸೂಚಿಸಿದೆ. ಅಕ್ರಮ ಚಟುಚಟಿಕೆಗಳು ದೇವಾಲಯಗಳಲ್ಲಿ ನಡೆಯುತ್ತಿವೆ ಎಂಬಂತಹ ಕಾಲವೂ ಬಂತೇ? ಎಂದು ಪೀಠ ಬೇಸರ ವ್ಯಕ್ತಪಡಿಸಿದೆ. ಜೊತೆಗೆ ದೇಗುಲಗಳನ್ನು ಉಳಿಸಿ ಎಂದು ಬುದ್ಧಿವಾದ ಹೇಳಿದೆ. ದೇಶ, ವಿದೇಶಗಳ ವಿವಿಧೆಡೆಯಿಂದ ಭಕ್ತಾದಿಗಳು ಇಲ್ಲಿ ದೇವರಿದ್ದಾರೆ ಎಂದು ಬರುತ್ತಾರೆ. ಆದರೆ, ಇಂತಹ ಮಂದಿರಗಳಲ್ಲಿಯೇ ಅಲ್ಲಿನ ಮಹಾಂತರು ಈ ಎಲ್ಲ ಚಟುವಟಿಕೆಗಳನ್ನು ನಡೆಸಿದ್ದಾರೆ. ಮೊದಲಿನ ಪ್ರಕರಣದಲ್ಲಿ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ, ಮುಂದುವರಿದು ಈಗ ಲಿವ್-ಇನ್ ಸಂಬಂಧ ಕೇಳಿಬಂದಿದೆ.
ಲಿವ್ ಇನ್ ಸಂಬಂಧ ಇರುವವರ ಜೊತೆಗೆ ಮಗುವೂ ಆಗಿದೆ. ಇದಲ್ಲದೆ ಪಂಜಾಬ್ ಪೊಲೀಸರು ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ ಎಂದು ನ್ಯಾಯಾಲಯ ಪ್ರಕರಣದ ಬಗ್ಗೆ ತೀವ್ರ ಬೇಸರ ಹೊರಹಾಕಿದೆ. ದಿಢೀರ್ ತಪಾಸಣೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ತಿಳಿಸಿದೆ. ಆಶ್ರಮ, ದೇವಾಲಯಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೆ ಅದು ಅತ್ಯಂತ ಚಿಂತಾಜನಕ ಸ್ಥಿತಿ ಎಂದು ತಿಳಿಸಿದೆ.
ದೇವಾಲಯದ ಪ್ರಧಾನ ಅರ್ಚಕ ರೋಹಿತ್ ಗಿರಿ ಅವರ ವಿರುದ್ಧ ಮಹಿಳೆಯೊಬ್ಬರ ವಿಚ್ಛೇದನ ಪ್ರಕ್ರಿಯೆ ನಡೆಯತ್ತಿರುವಾಗಲೇ ಆಕೆಯೊಂದಿಗೆ ಸಹಜೀವನದಲ್ಲಿ ತೊಡಗಿ ಮಗು ಪಡೆದಿರುವುದು. ಜೊತೆಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ವಿವಿಧ ಪ್ರಕರಣಗಳು ದಾಖಲಾಗಿರುವುದನ್ನು ಗಮನಿಸಿರುವ ನ್ಯಾಯಾಲಯ ಇಂತಹ ಘಟನೆಗಳಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದಿದೆ. ಕನಿಷ್ಠ ದೇವಾಲಯ, ಮಸೀದಿ, ಗುರುದ್ವಾರಗಳಂತಹ ಪವಿತ್ರ ಸ್ಥಳಗಳನ್ನು ಇಂತಹ ಚಟುವಟಿಕೆಗಳಿಂದ ಉಳಿಸಬೇಕೆಂದು ಖಡಕ್ ಎಚ್ಚರಿಕೆ ನೀಡಿದೆ.
ದೇವರಿಗೆಂದು ಭಕ್ತಾದಿಗಳು ನೀಡುವ ದೇಣಿಗೆ ಹಣವನ್ನು ಭೋಗಲಾಲಸೆಗೆ ಬಳಸುವ ಅರ್ಚಕರ ಪ್ರವೃತ್ತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಕ್ತರು ಕೊಡುವ ದಾನ ನಿಮ್ಮ ಕೌಟುಂಬಿಕ ಜೀವನಕ್ಕಾಗಿಯೇ? ಎಂದು ಕಿಡಿಕಾರಿದೆ. ದಾನ ನೀಡುವುದು ಸಾಮಾಜಿಕ ಸೇವೆಗಳ ಉದ್ದೇಶಕ್ಕಾಗಿ ಎಂದು ತಿಳಿಸಿದೆ. ಈ ಹಿಂದೆ ದೇವಸ್ಥಾನಕ್ಕೆ ಸಂಬಂಧಿಸಿದ ಟ್ರಸ್ಟ್ನ ಅವ್ಯವಸ್ಥೆಯನ್ನು ಗಣನೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಟ್ರಸ್ಟ್ ಕಾರ್ಯವೈಖರಿ ಮೇಲ್ವಿಚಾರಣೆ ಮಾಡುವಂತೆ ಬದರೀನಾಥ, ಕೇದಾರನಾಥ, ಹರಿದ್ವಾರಸ ದೇವಸ್ಥಾನ ಸಮಿತಿಗೆ (ಬಿಕೆಟಿಸಿ) ಸೂಚಿಸಿತ್ತು.
ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ 2025ರ ಆಗಸ್ಟ್ನಲ್ಲಿ ಸ್ಪಷ್ಟಪಡಿಸಿತ್ತು. ಅಲ್ಲದೆ ಹರಿದ್ವಾರ ಜಿಲ್ಲಾಧಿಕಾರಿ ತನಿಖೆ ನಡೆಸಬೇಕು ಮತ್ತು ಬಿಕೆಟಿಸಿ ಹೈಕೋರ್ಟ್ಗೆ ನಿಯಮಿತ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಬಿಕೆಟಿಸಿ ಸುಪರ್ದಿಗೆ ಬಂದ ಬಳಿಕ ದೇವಸ್ಥಾನದ ಆದಾಯದಲ್ಲಿ ಹೆಚ್ಚಳವಾಗಿದ್ದು, ಅತಿಕ್ರಮಣ ತೆರವುಗೊಳಿಸಲಾಗಿದೆ ಎಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ನವೀಕೃತ ವರದಿ ಕೇಳಿದ ಹೈಕೋರ್ಟ್ ತನಿಖೆಗೆ ಸಹಕರಿಸದಿದ್ದರೆ ಅರ್ಚಕ ಗಿರಿಗೆ ನೀಡಿರುವ ಮಧ್ಯಂತರ ರಕ್ಷಣೆಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.















