ಶಿವಮೊಗ್ಗ: ಮಂಗನ ಕಾಯಿಲೆಗೆ(ಕ್ಯಾಸನೂರು ಫಾರೆಸ್ಟ್ ಡಿಸೀಸ್ -ಕೆಎಫ್ಡಿ) ಲಸಿಕೆ 2026ಕ್ಕೆ ಲಭ್ಯವಾಗಲಿದೆ. ಮಂಗನ ಕಾಯಿಲೆಯಿಂದ ರಾಜ್ಯದಲ್ಲಿ ಯಾರೊಬ್ಬರು ಸಾವನ್ನಪ್ಪಬಾರದು, ಈ ಕಾಯಿಲೆ ತಡೆಗಟ್ಟುವುದಕ್ಕೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗನ ಕಾಯಿಲೆಯಿಂದ 23 ಮಂದಿ ಸಾವನ್ನಪ್ಪಿದ ಸಾಗರ ತಾಲೂಕಿನ ಅರಳಗೋಡು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕಾಯಿಲೆಯಿಂದ ಯಾವುದೇ ವ್ಯಕ್ತಿ ಸಾಯಬಾರದು ಎಂಬ ಉದ್ದೇಶದಿಂದ ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಜತೆ ಈಗಾಗಲೇ ಚರ್ಚೆ ನಡೆಸಿದ್ಧೇನೆ. ಈಗ ಹೈದರಾಬಾದಿನ ಸಂಸ್ಥೆಯೊಂದಿಗೆ ಮಾತುಕತೆ ನಡೆದಿದೆ. ಈ ಸಂಸ್ಥೆಗೆ ಸರ್ಕಾರದ ಸಿಎಸ್ಆರ್ ನಿಧಿನಿಂದ 10 ಕೋಟಿ ಅನುದಾನ ನೀಡಿದ್ದು, 2026ನೇ ಸಾಲಿನ ಹೊತ್ತಿಗೆ ಲಸಿಕೆ ಲಭ್ಯವಾಗಲಿದೆ ಎಂದರು.
ಪೂರ್ವಭಾವಿ ಸಭೆ: ಕೆಎಫ್ಡಿ ಕುರಿತು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಇಂದು 23 ಮಂದಿ ಸಾವನ್ನಪ್ಪಿದ ಅರಳಗೋಡು ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಮಂಗನಕಾಯಿಲೆ ವಿಚಾರವಾಗಿ ಇಲ್ಲಿರುವ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಲಸಿಕೆ ಲಭ್ಯವಾಗುವ ವರೆಗೂ ಯಾವುದೇ ಸಾವುಗಳಾಗಬಾರದು ಎಂಬ ಮುಂಜಾಗ್ರತೆಯಿಂದ ಸಭೆ ನಡೆಸಲಾಗುತ್ತಿದೆ ಎಂದರು.
ಮಂಗನ ಕಾಯಿಲೆ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಚಿಂತನೆ ಮಾಡಲಾಗುವುದು. ಕೆಎಫ್ಡಿ ಖಚಿತ ಪಡಿಸಿಕೊಳ್ಳು ಸ್ಯಾಂಪಲ್ಗಳನ್ನು ಬೆಂಗಳೂರು ಹಾಗೂ ಪುಣೆಗೆ ಕಳುಹಿಸಬೇಕಾಗತ್ತದೆ. ಪರೀಕ್ಷಾ ವರದಿ ತ್ವರಿತವಾಗಿ ಸಿಗುವಂತೆ ಮಾಡುವ ಕುರಿತು ಚರ್ಚೆ ನಡೆಸಲಾಗುವುದು. ಕೆಎಫ್ಡಿ ಲ್ಯಾಬ್ ಎಲ್ಲಿ ಆಗಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗುವುದು. ಹಂದಿಗೋಡು ಕಾಯಿಲೆಗೆ ಇನ್ನೂ ಔಷಧ ಸಿಕ್ಕಿಲ್ಲ. ಅದರ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಕೋವಿಡ್ ಹಗರಣದ ತನಿಖೆಗೆ ಎಸ್ಐಟಿ ರಚನೆ ಆಗಿದೆ. ಈ ಕುರಿತು ಸಂಪುಟದ ಉಪ ಸಮಿತಿಯ ಸಭೆ ನಡೆಯಲಿದೆ ಎಂದ ಅವರು, ಉಪ ಚುನಾವಣೆ ಫಲಿತಾಂಶ ಎಲ್ಲರಿಗೂ ಉತ್ತರ ನೀಡಿದೆ. ವಿಪಕ್ಷಗಳಿಗೆ ಜನ ತಕ್ಕ ಉತ್ತರ ನೀಡಿದ್ದಾರೆ. ನಿಮ್ಮ ಕೆಲಸ ಮುಂದುವರೆಯಲಿ ಎಂದು ಜನ ನಮಗೆ ಆರ್ಶೀವಾದಿಸಿದ್ದಾರೆ ಎಂದು ಹೇಳಿದರು.