ಮನೆ ರಾಜ್ಯ ಸಂಸ್ಕೃತಿ ಸಂಸ್ಕಾರಕ್ಕೆ ವಚನಗಳು ಆಧಾರ: ಕೆ.ಹರೀಶ್ ಗೌಡ

ಸಂಸ್ಕೃತಿ ಸಂಸ್ಕಾರಕ್ಕೆ ವಚನಗಳು ಆಧಾರ: ಕೆ.ಹರೀಶ್ ಗೌಡ

0

ಮೈಸೂರು: ನಮ್ಮ ಸಂಸ್ಕೃತಿ ಸಂಸ್ಕಾರಕ್ಕೆ ವಚನಗಳು ಆಧಾರವಾಗಿದ್ದು, ವಚನಗಳು ಸಾರುವ ಶ್ರೇಷ್ಠ ಸಂದೇಶಗಳ ಮೇಲೆ ನಾಡು ನಿಂತಿದೆ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡರವರು ತಿಳಿಸಿದರು.

Join Our Whatsapp Group


ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಫಾಗು ಹಳಕಟ್ಟಿ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಚನಗಳ ಸಂರಕ್ಷಣೆಯಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಪ್ರಮುಖವಾಗಿದೆ. ಮಠಗಳಲ್ಲಿ ವಚನಗಳ ಮೂಲಕ ಆಶೀರ್ವಚನ ಮಾಡುತ್ತಾರೆ ಇದರಿಂದ ವಚನಗಳ ಶ್ರೇಷ್ಠತೆಯನ್ನು ನಾವು ಅರಿಯಬೇಕಿದೆ. ವಚನಗಳನ್ನು ನಶಿಸಿ ಹೋಗಲು ಬಿಡಬಾರದು ಬದಲಾಗಿ ಮುಂದಿನ ಪೀಳಿಗೆಯಲ್ಲಿ ವಚನಗಳ ಸಂರಕ್ಷಣೆಯ ಆದ್ಯತೆಯನ್ನು ಅರಿಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ಅವರು, ಅಂದಿನ ಕಾಲದಲ್ಲಿಯೇ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದ ಸುಧಾರಣೆಗೆ ಹಾಗೂ ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ ಸಾಮಾಜಿಕ ದನಿಯಾಗಿದ್ದರು. ಆಚಾರ-ವಿಚಾರಗಳಿಗೆ ವಚನಗಳು ಸ್ಪೂರ್ತಿದಾಯಕವಾಗಿವೆ. ವಚನ ಸಾಹಿತ್ಯದ ಮಹತ್ವವನ್ನು ಅರಿಯಲು ಈ ರೀತಿಯ ವಿಚಾರ ಸಂಕಿರಣಗಳು ಸಹಾಯಕಾರಿಯಾಗಿವೆ ಎಂದು ತಿಳಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಡಾ. ವಿಜಯ್ ಕುಮಾರಿ ಕರಿಕಲ್ ಅವರು ಮಾತನಾಡಿ, ವಚನ ಸಾಹಿತ್ಯದ ಮೇರು ವ್ಯಕ್ತಿ, ತಮ್ಮ ಇಡೀ ಜೀವನವನ್ನೇ ವಚನ ಸಂರಕ್ಷಣೆಗಾಗಿ ಮುಡಿಪಿಟ್ಟ ಡಾ. ಫ.ಗು ಹಳಕಟ್ಟಿಯವರ ಜನ್ಮ ದಿನಾಚರಣೆಯನ್ನು ವಚನ ಸಂರಕ್ಷಣಾ ದಿನಾಚರಣೆಯನ್ನಾಗಿ ಕಳೆದ ವರ್ಷದಿಂದ ಆಚರಿಸಲಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳು ಬಜೆಟ್ ಮಂಡಿಸುವಾಗ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಾಗಿ 50 ವರ್ಷಗಳು ಕಳೆದಿವೆ. ಈ ಸಂಬoಧ ಒಂದು ವರ್ಷ ಸಂಭ್ರಮಾಚರಣೆ ಮಾಡುವ ವಿಚಾರವನ್ನು ಪ್ರಸ್ತಾಪಿಸಿದರು. ಈ ವಿಚಾರ ಬಹಳ ಸಂತೋಷದಾಯಕ ಹಾಗೂ ಸ್ವಾಗತಾರ್ಹ. ಬಹುತೇಕ ಕನ್ನಡ ಕಟ್ಟುವ ಕೆಲಸಗಳು ಈ ರೀತಿಯದ್ದೇ. ಕನ್ನಡ ಪರ ಕೆಲಸಗಳಿಗಾಗಿ ವಿಶ್ವವಿದ್ಯಾನಿಲಯಗಳಿಗೆ ಅನುದಾನ ನೀಡಿದರೆ ಕನ್ನಡ ಪರ ಕೆಲಸ ಮಾಡಲು ಹಾಗೂ ಪರಿಣಾಮಕಾರಿಯ ಯೋಜನೆಗಳನ್ನು ರೂಪಿಸಲು ಸಹಾಯವಾಗುತ್ತದೆ ಎಂದು ಶಾಸಕರಿಗೆ ಕುವೆಂಪು ಕನ್ನಡ ಜನಸಂಸ್ಥೆಯ ಕನ್ನಡ ಅಧ್ಯಾಪಕರ ಸಂಘಟನೆ ವತಿಯಿಂದ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜೆ ಗೋವಿಂದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.